ಹೊಸಪೇಟೆ: ಮದುವೆಯಾಗಲು ನಿರಾಕರಣೆ ಮಾಡಿದ ಯುವತಿಯನ್ನು ಚಾಕುನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಸ್ಥಳೀಯ ನಗರಸಭೆ ಕಚೇರಿ ಬಳಿ ಮಂಗಳವಾರ ನಡೆದಿದೆ.
ನಗರದ ನಿವಾಸಿ ಭಾರತಿ ಶಾವಿ (26) ಯುವಕನ ದಾಳಿಗೆ ಒಳಗಾಗದ ಯುವತಿ. ಆಂಧ್ರ ಪ್ರದೇಶ ಮೂಲದ ವಿಜಯಭಾಸ್ಕರ್(26) ಯುವತಿಯ ಕೊಲೆಗೆ ಯತ್ನಿಸಿದ ಕಿರಾತಕ.
ಯುವತಿ ಭಾರತಿ ಶಾವಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ನಗರದ ನಗರಸಭೆ ಕಚೇರಿ ಬಳಿ ದಿಢೀರ್ ಪ್ರತ್ಯಕ್ಷನಾದ ಯುವಕ, ಚಾಕುವಿನಿಂದ ಯುವತಿಯ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಯುವತಿಯ ಹೊಟ್ಟೆ, ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳೀಯರು ದಾವಿಸಿ ಬಂದು ಯುವತಿಯ ರಕ್ಷಣೆ ಮಾಡಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣವೇ ಯುವತಿಯನ್ನು ನಗರದ ನೂರು ಹಾಸಿಗೆ ಆಸ್ವತ್ರೆಗೆ ದಾಖಲು ಮಾಡಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ವತ್ರೆಗೆ ಕಳುಹಿಸಿಕೊಡಲಾಗಿದೆ.
ಯುವತಿ ಭಾರತಿ ಶಾವಿ ಮತ್ತು ವಿಜಯ ಭಾಸ್ಕರ್ ಇಬ್ಬರು ಪ್ರೀತಿ ಮಾಡುತ್ತಿದ್ದು, ಮದುವೆಯಾಗಲು ಯುವತಿ ನಿರಾಕರಿಸಿದ ಹಿನ್ನೆಲೆ ಯುವಕ ಹತ್ಯೆಗೆ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.