ಮುಂದಿನ ಆರು ತಿಂಗಳಲ್ಲಿ  ಪೊಲೀಸ್ ವಿವಿಧ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು : ಮುಂದಿನ ಆರು ತಿಂಗಳಲ್ಲಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ 4547 ಮಂದಿಯನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ,ಈ ಪೈಕಿ 1547 ಮಂದಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಗಳು,3000 ಮಂದಿ ಕಾನ್ಸ್ ಟೇಬಲ್ ಗಳು ಇರಲಿದ್ದಾರೆ ಎಂದರು.

ನ್ಯಾಯಾಲಯದಿಂದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ 545 ಮಂದಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್  ಹುದ್ದೆಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಭರ್ತಿ ಮಾಡಲಾಗುವುದು ಎಂದ ಅವರು,ತದ ನಂತರ 402 ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು ಎಂದರು.

 

 ನಂತರ 600 ಮಂದಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುವುದು ಎಂದ ಅವರು,ಒಟ್ಟಾರೆಯಾಗಿ 1547 ಪಿ.ಎಸ್.ಐ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದರು.

ಇದೇ ರೀತಿ ಮೂರು ಸಾವಿರ ಕಾನ್ಸ್ ಟೇಬಲ್ ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆದಷ್ಟು ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಪೋಲೀಸ್ ಇಲಾಖೆಗೆ ಇನ್ನೂ ಹದಿನೈದು ಸಾವಿರ ಕಾನ್ಸ್ ಟೇಬಲ್ ಗಳ ಅಗತ್ಯವಿದ್ದು,ಹಂತ ಹಂತವಾಗಿ ಇದನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದ ಅವರು,ಆಯ್ಕೆಯಾಗುವವರಿಗೆ ತರಬೇತಿ ನೀಡುವ ಅಗತ್ಯವಿರುವುದರಿಂದ ಒಂದೇ ಕಂತಿನಲ್ಲಿ ಇಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳುವುದು ಕಷ್ಟ ಎಂದರು.

 

ಪ್ರತಿ ವರ್ಷ ನಿವೃತ್ತಿಯಾಗುವ ಪೋಲೀಸ್ ಸಿಬ್ಬಂದಿಗಳ ಜಾಗಕ್ಕೆ ಹೊಸ ನೇಮಕಾತಿ ಮಾಡಿಕೊಳ್ಳಲು ಈಗ ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಬೇಕು. ಆದರೆ ನಿವೃತ್ತರ ಜಾಗಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದವರು ಪ್ರತಿಪಾದಿಸಿದರು.

ನಿವೃತ್ತ ಪೋಲೀಸ್ ಸಿಬ್ಬಂದಿಗಳ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದು ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕಾನೂನು ತಂದಿದ್ದೆವು.ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಿವೃತ್ತ ಪೋಲೀಸ್ ಸಿಬ್ಬಂದಿಗಳ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯಬೇಕು ಎಂದು ನಿಯಮ ಬದಲಿಸಿದೆ.

ಆದರೆ ಹೊಸ ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡುವುದು ಸರಿ.ಆದರೆ ಅಸ್ತಿತ್ವದಲ್ಲಿರುವ ಹುದ್ದೆಗಳ ಅನುಮತಿಗೆ ಅದರ ಅನುಮತಿ ಬೇಕಿಲ್ಲ ಎಂದ ಅವರು,ಮುಂದಿನ ದಿನಗಳಲ್ಲಿ ಈ ನಿಯಮವನ್ನು ಬದಲಿಸಿ ಕಾನೂನು ರೂಪಿಸಲಾಗುವುದು ಎಂದರು.

 

ಪೋಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಮಾಡಲಾಗುತ್ತಿದ್ದು ಇನ್ನು ಮುಂದೆ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕು ಎಂಬ ಕಾನೂನನ್ನು ರೂಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳನ್ನು ಡ್ರಗ್ ಮುಕ್ತ ಜಿಲ್ಲೆಗಳೆಂದು ಘೋಷಿಸಲು ಸಿದ್ಧತೆ ನಡೆಸಲಾಗಿದೆ ಎಂದು ನುಡಿದರು.

 

ಸಿಂಥೆಟಿಕ್ ಡ್ರಗ್ ವಿಷಯದಲ್ಲಿ ಸರ್ಕಾರಕ್ಕೆ ಆತಂಕವಿದ್ದು ಗಾಂಜಾದಂತಹ ಮಾದಕ ವಸ್ತುಗಳಿಗಿಂತ ಎಂ.ಡಿ.ಎಂ.ಎ ನಂತಹ ಸಿಂಥೆಟಿಕ್ ಡ್ರಗ್ ಗಳು ತುಂಬ ಅಪಾಯಕಾರಿ ಎಂದರಲ್ಲದೆ,ಡ್ರಗ್ಸ್ ಜಾಲದ ವಿರುದ್ಧ ಪೋಲೀಸ್ ಇಲಾಖೆ ಹಿಂದೆಂದಿಗಿಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸ್ಪಷ್ಟ ಪಡಿಸಿದರು.

ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸುವ ಸಂಬಂಧ ಚರ್ಚೆ ನಡೆದಿದ್ದು,ಮುಂದಿನ ಕೆಲವೇ ದಿನಗಳಲ್ಲಿ ಪರಿಣಾಮಕಾರಿಯಾದ ಹೆಜ್ಜೆ ಇಡಲಾಗುವುದು ಎಂದು ವಿವರಿಸಿದರು.

 

ರೌಡಿಗಳನ್ನು ಹತ್ತಿಕ್ಕಲು ಪೋಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು,ಏನೇ ಮಾಡಿದೂ ನಿಯಂತ್ರಣಕ್ಕೆ ಬರದ ರೌಡಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಪೋಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top