ನೈಸರ್ಗಿಕ ಸಂಪತ್ತಿನ ಹಿತಮಿತ ಬಳಕೆ ಇಂದಿನ ಆಗತ್ಯ: ಈಶ್ವರ ಖಂಡ್ರೆ

ಮೈಸೂರು: ಪ್ರಕೃತಿ ಪರಿಸರ ಉಳಿದರೆ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ. ಈ ನಿಟ್ಟನಲ್ಲಿ ನೈಸರ್ಗಿಕ ಸಂಪನ್ಮೂಲದ ಹಿತಮಿತ ಬಳಕೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.

ಮೈಸೂರಿನ ಮುಕ್ತಗಂಗೋತ್ರೀಯ ಸಭಾಂಗಣದಲ್ಲಿಂದು ರಾಜೀವ್ ಸ್ನೇಹ ಬಳಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಗಿಡ, ಮರ, ಬೆಟ್ಟ, ಗುಡ್ಡ, ನದಿಗಳನ್ನು ಪೂಜಿಸುತ್ತಿದ್ದರು. ಬೆಟ್ಟದ ಮೇಲೆ ದೇವಾಲಯ ಕಟ್ಟಿ ಬೆಟ್ಟ ನಾಶವಾಗದಂತೆ ತಡೆದಿದ್ದಾರೆ. ಪ್ರಕೃತಿ ಸಮತೋಲನ ಕಾಪಾಡಿದ್ದಾರೆ ಎಂದರು.

ಪ್ರಕೃತಿ, ಪರಿಸರವನ್ನು ನಾವು ರಕ್ಷಿಸಿದರೆ, ಪ್ರಕೃತಿ, ಪರಿಸರ ನಮ್ಮನ್ನು ರಕ್ಷಿಸುತ್ತದೆ.ಇಂದು ಜಗತ್ತಿನ ಮುಂದಿರುವ ಅತಿ ದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಾಗಿದೆ. ಹವಾಮಾನ ಬದಲಾವಣೆಯಿಂದ ಋತುಮಾನಗಳಲ್ಲಿ ಬದಲಾವಣೆ ಆಗುತ್ತಿದೆ. ಮಳೆಗಾಲದಲ್ಲಿ ಮಳೆಯಾಗುತ್ತಿಲ್ಲ, ಒಂದೇ ದಿನದಲ್ಲಿ ಒಂದು ತಿಂಗಳ ಪೂರ್ತಿ ಮಳೆ ಸುರಿದು ಅನಾಹುತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಪರಿಸರದ ಮೇಲಿನ ದೌರ್ಜನ್ಯವನ್ನು ಸ್ವಯಂ ನಿಯಂತ್ರಿಸಬೇಕು ಎಂದರು.

ಜಾಗತಿಕ ತಾಪಮಾನ ಏರಿಕೆಗೆ ಇಂಗಾಲದ ಡೈಆಕ್ಸೈಡ್, ಹಸಿರು ಮನೆ ಅನಿಲಗಳು ಕಾರಣ. ನಾವು ಹೆಚ್ಚು ಹೆಚ್ಚು ಗಿಡ, ಮರ ಬೆಳೆಸಿದರೆ ಮಾತ್ರವೇ ತಾಪಮಾನ ಏರಿಕೆ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ರಾಜೀವ್ ಸ್ನೇಹ ಬಳಗ ಮಾಡುತ್ತಿರುವ ಕಾರ್ಯ ಅಭಿನಂದನಾರ್ಹ ಮತ್ತು ಅನುಕರಣೀಯ ಎಂದರು.

5 ಕೋಟಿ ಸಸಿ ನೆಟ್ಟ ಸಾಧನೆ :

ಮರಗಿಡಗಳ ಮಹತ್ವವನ್ನು ರಾಜ್ಯ ಸರ್ಕಾರ ಮನಗಂಡಿದ್ದು, ಕಳೆದ ವರ್ಷ ತಾವು ಸಚಿವರಾದ ತರುವಾಯ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿ, 5 ಕೋಟಿ 40 ಲಕ್ಷಕ್ಕೂ ಅಧಿಕ ಸಸಿ ನೆಟ್ಟು ಗುರಿ ಮಾಡಿದ ಸಾಧನೆ ಮಾಡಲಾಗಿದೆ. ಈಗ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿವೆ ಎಂದು ತಿಳಿಯಲು ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಮಾಡಲಾಗುತ್ತಿದೆ. ಈ ವರದಿಯನ್ನು 3 ತಿಂಗಳೊಳಗೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಈ ಬಾರಿಯೂ 5 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಪರಿಸರ ಪ್ರೇಮಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನಲ್ಲಿ ಸಸಿ ನೆಡಲು 100 ಕೋಟಿ ರೂ. ಹೆಚ್ಚುವರಿಯಾಗಿ ನೀಡಿದ್ದಾರೆ ಎಂದರು.

ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪರಿಸರ, ಪ್ರಕೃತಿ ಉಳಿಸಬೇಕು. ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದರು.

ಮುಖ್ಯಮಂತ್ರಿಯವರು ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿದ್ದಾರೆ. ನಮ್ಮ ಪರಿಸರ ಇಲಾಖೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಇದಕ್ಕೆ ಜನರೂ ಕೈಜೋಡಿಸಬೇಕು ಮತ್ತು ತಾವು ಏಕ ಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಶಪತ ಮಾಡಬೇಕು ಎಂದು ಕರೆ ನೀಡಿದರು.

 

ಇದೇ ಸಂದರ್ಭದಲ್ಲಿ ಸಿರಿ ಸಂವರ್ಧನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದ  ಕಾರ್ಯಕ್ರಮದಲ್ಲಿ ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಮಾಜಿ ಸಚಿವ ತನ್ವಿರ್ ಸೇಠ್, ಹಿರಿಯ ಪತ್ರಕರ್ತ ಅಂ.ಶಿ. ಪ್ರಸನ್ನ ಮತ್ತಿತರರು ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top