ಬೆಂಗಳೂರು: ಪ್ರಸ್ತುತ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರನಾಮಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ಬೆಂಗಳೂರಿನಲ್ಲಿ ಪ್ರಕಟಿಸಿದರು.
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಭೆಯ ನಿರ್ಣಯ ಕುರಿತು ವಿವರಿಸಿದ ಅವರು ಬ್ರ್ಯಾಂಡ್ ಬೆಂಗಳೂರು ಮೂಲಕ ಸೇರ್ಪಡೆ (Inclusive Growth) ಅಭಿವೃದ್ಧಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ಸದುದ್ದೇಶದಿಂದ ಈ ಹೊಸ ನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ರಾಜ್ಯ ಸಚಿವ ಸಂಪುಟದ ಇತರ ನಿರ್ಣಯಗಳನ್ನು ಪ್ರಕಟಿಸಿದ ಅವರು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿಯ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಪ್ರಸ್ತಾಪಿಸಿತ್ತು. ಪ್ರಸ್ತಾಪಕ್ಕೆ ದಿನಾಂಕ: 21.06.2024ರ ಸರ್ಕಾರಿ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಮೆ|| ಲೋಕ ಶಿಕ್ಷಣ ಟ್ರಸ್ಟ್ ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು 2.64 ಎಕರೆ ಜಮೀನನ್ನು ಹಂಚಿಕೆ ಮಾಡಲು ಕೈಗಾರಿಕಾ ಇಲಾಖೆ ಪ್ರಸ್ತಾಪಿಸಿತ್ತು. ಪ್ರಸ್ತಾಪಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಸಿ.ಎ ನಿವೇಶನ ಸಂಖ್ಯೆ: 1 ರಲ್ಲಿ 2.64 ಎಕರೆ ಜಮೀನನ್ನು ಪ್ರಸ್ತುತವಿರುವ ಹಂಚಿಕೆ ದರದ ಮೇಲೆ ಶೇ.75 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಹಾಗೂ ವಿಸ್ತರಿಸುವ ರಿಯಾಯಿತಿ ಮೊತ್ತವನ್ನು ಸರ್ಕಾರದಿಂದ ಕೆಐಎಡಿಬಿಗೆ ಮರುಪಾವತಿ ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಸಚಿವರು ವಿವರಿಸಿದರು.
ಬೆಂಗಳೂರು ಆಧಾರಿತ ಅನಿಮೇಶನ್ ಇಂಡಸ್ಟಿ ABAI (Association of Bangalore Animation Industry) ಸಂಘಟನೆಯು ಅನಿಮೇಶನ್, VFX (Visual Effects) ಮತ್ತು ಗೇಮಿಂಗ್ (AVGC) ಉದ್ಯಮವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಇದು ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರ ಮತ್ತು AVGC (Animation, Visual Effects, Gaming and Comics) ಸಮುದಾಯದ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ. ಒಟ್ಟು ರೂ.16.00 ಕೋಟಿಗಳ ವೆಚ್ಚದಲ್ಲಿ ಈ ಉತ್ಕೃಷ್ಟತಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
2024-25ನೇ ಸಾಲಿನಲ್ಲಿ ಈಗ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ 18 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡುವುದಾಗಿ ಮುಂಗಡ ಪತ್ರದ ಭಾಷಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿದ್ದರು. ಈ ಪೈಕಿ ತಲಾ 100 ವಿದ್ಯಾರ್ಥಿಗಳಿಗೆ ಒಂದು ಹಾಸ್ಟೆಲ್ನಂತೆ ೧೫ ಹಾಸ್ಟೆಲ್ಗಳ ನಿರ್ಮಾಣವನ್ನು ಕೈಗೊಳ್ಳಲಾಗುವುದು. ಪ್ರತಿ ಹಾಸ್ಟೆಲ್ ವೆಚ್ಚ ರೂ.7.00 ಕೋಟಿಗಳು. ಒಟ್ಟು ಯೋಜನಾ ವೆಚ್ಚ ರೂ.105.00 ಕೋಟಿಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.
ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ಹುದ್ದೆಗೆ ಬಡ್ತಿ ಹೊಂದಲು ಪ್ರೌಢ ಶಾಲಾ ಶಿಕ್ಷಕರಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ.55 ರಷ್ಟು ಅಂಕಗಳನ್ನು ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೇಂದ್ರಿಕೃತ ದಾಖಲಾತಿ ಘಟಕ ಅಥವಾ ಕರ್ನಾಟಕ ಲೋಕಸೇವಾ ಆಯೋಗಗಳನ್ನು ಉಪನ್ಯಾಸಕರ ವೃಂದದ ಆಯ್ಕೆ ಪ್ರಾಧಿಕಾರವೆಂದು ನಿಗದಿಪಡಿಸಲು ಮತ್ತು ಉಪನ್ಯಾಸಕ ವೃಂದದ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಸ್ತಾವನೆಯನ್ನು ಸಚಿವ ಸಂಪುಟವು ಒಪ್ಪಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ, 2013ರನ್ವಯ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ನರ್ಣಯಿಸಿದೆ. ಕೌಶಲ್ಯ ಮಿಷನ್ನ ಎಲ್ಲಾ ಅಲ್ಪಾವಧಿ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೆಡೆ ತರುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪಿಸಲು ಮತ್ತು ರಾಜ್ಯ ಸರ್ಕಾರದಿಂದ ಅನುಮೋದಿಸಲಾದ “ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ” ಮತ್ತು ಕೇಂದ್ರ ಸರ್ಕಾರದಿಂದ ಅನುಮೋದಿಸಲಾದ “ಪ್ರಧಾನಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ” ಮತ್ತು “ಸಂಕಲ್ಪ ಯೋಜನೆ”ಗಳನ್ನು ಕೌಶಲ್ಯಾಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ವಿಶೇಷ ಅಭಿವೃದ್ಧಿ ವಾಹಕವು ರೂ.5.00 ಕೋಟಿ ಅಧಿಕೃತ ಷೇರು ಬಂಡವಾಳ ರೂ.1.00 ಕೋಟಿ Paid up capital. ರೂ.100.00 ಮುಖಬೆಲೆಯ ರೂ.5.00 ಲಕ್ಷ ಇಕ್ವೀಟಿ ಷೇರುಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಈ ಸರ್ಕಾರಿ ಸಂಸ್ಥೆಗೆ 6 ಜನ ನಿರ್ದೇಶಕರನ್ನು ನೇಮಕ ಮಾಡಲು ಅವರಲ್ಲಿ 3 ಜನ ಪುರುಷ ಸರ್ಕಾರೇತರ 2 ಮಹಿಳಾ ಸರ್ಕಾರೇತರ ಹಾಗೂ ನಿರ್ದೇಶಕರು, ಐಟಿಬಿಟಿ ನಿರ್ದೇಶಕರಾಗಿರುತ್ತಾರೆಂದು ಸಚಿವರು ತಿಳಿಸಿದರು.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಉದ್ಯಾನವನ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಈಗಾಗಲೇ ನೀಡಿರುವ ಅನುಮೋದನೆಯಂತೆ ಟೆಂಡರ್ ಕರೆಯುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದಿಸಿದೆ.
ಕೃಷ್ಣರಾಜಸಾಗರ ಆಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಗೆ ಉನ್ನತೀಕರಣಗೊಳಿಸುವ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಯನ್ನು ಆರ್ಥಿಕ ಇಲಾಖೆ, ಯೋಜನಾ ಇಲಾಖೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಪರಿಷ್ಕರಿಸಿ ಟೆಂಡರ್ ಮುಖಾಂತರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ. ಒಟ್ಟು ಯೋಜನಾ ವೆಚ್ಚ ರೂ.2663.74 ಕೋಟಿ. 34.5 ವರ್ಷಗಳ ಒಟ್ಟು ರಿಯಾಯಿತಿ ಅವಧಿಯು 4.5 ವರ್ಷಗಳ ರಿಯಾಯಿತಿ ಅವಧಿಯು ಸೇರಿದೆ. ಮಾಸ್ಟರ್ ಪ್ಲಾನ್ನಲ್ಲಿ ಒಟ್ಟು 45 ಘಟಕಗಳನ್ನು ಪರಿಗಣಿಸಲಾಗಿದೆ ಎಂದು ಸಚಿವರು ವಿವರ ನೀಡಿದರು.