ಕೈವಾರ ಯೋಗಿ ನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ – ನಾಡಿನ ಜನರ ಸಮೃದ್ಧಿಗಾಗಿ ಪ್ರಾರ್ಥನೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಇಂದು ಕೈವಾರದ ಯೋಗಿ ನಾರಾಯಣ ದೇವಾಲಯ, ಘಾಟಿ ಸುಬ್ರಮಣ್ಯ ಸೇರಿದಂತೆ ಹಲವು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಯಲಹಂಕದ ಚೌಡೇಶ್ವರಿ ದೇವಾಲಯದಲ್ಲಿ ಕೊಂಡ ಹಾಯ್ದು ರಕ್ಷಾ ರಾಮಯ್ಯ, ನಾಡಿನಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿ ನೆಲಸಲಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ತಾಯಿ ಚೌಡೇಶ್ವರಿ ಸಕಲ ಸಮೃದ್ಧಿ ಕಲ್ಪಿಸಲಿ ಎಂದು ಪ್ರಾರ್ಥಿಸಿದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮದುರೆ ಶನೇಶ್ವರ ಸ್ವಾಮಿ ಸೇರಿ ವಿವಿಧ ದೇವಾಲಯಗಳಿಗೆ ತೆರಳಿ, ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಹಿತ ರಕ್ಷಣೆಗಾಗಿ ಪೂಜೆ ಸಲ್ಲಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿರುವ ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಎಂ.ಆರ್. ಜಯರಾಂ, ವಿಧಾನಪರಿಷತ್ ಸದಸ್ಯರಾದ ಎಂ.ಆರ್ ಸೀತಾರಾಂ ಅವರ ಜೊತೆಗೂಡಿ ಕೈವಾರದಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯನವರ ಆಶೀರ್ವಾದ ಪಡೆದರು.
ಉಗಾದಿ ಹಬ್ಬದ ಪ್ರಯುಕ್ತ ಇಂದು ಕೈವಾರಕ್ಕೆ ಭೇಟಿ ನೀಡಿ ನಾಡಿನ ಜನರ ಯೋಗ ಕ್ಷೇಮ ಕಾಪಾಡುವಂತೆ ಕೈವಾರ ತಾತಯ್ಯನವರಲ್ಲಿ ಪ್ರಾರ್ಥಿಸಿದರು.
ನಂತರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿದರು.
ಇಡೀ ದಿನ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೇವು – ಬೆಲ್ಲ ಸವಿದು ಕಷ್ಟ ಸುಖ ಸಮನಾಗಿರಲಿ ಎಂದು ಶುಭಾಶಯ ವಿನಿಯಮ ಮಾಡಿಕೊಂಡರು.
ಎಲ್ಲೆಡೆ ರಕ್ಷಾ ರಾಮಯ್ಯ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಯುವ ಸಮೂಹ, ಮಹಿಳೆಯರು, ಹಿರಿಯ ನಾಗರಿಕರು ರಕ್ಷಾ ರಾಮಯ್ಯ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.