ರಾಜ್ಯ ಕಾಂಗ್ರೆಸ್ ಗೆ 150 ಸೀಟು ಗೆಲ್ಲುವ ಗುರಿ ಕೊಟ್ಟ ರಾಹುಲ್ ಗಾಂಧಿ

ಬೆಂಗಳೂರು: ‘ಕರ್ನಾಟಕ ‌ಕಾಂಗ್ರೆಸ್ ಪರ ರಾಜ್ಯ. ಇದು ಸ್ವಾಭಾವಿಕ ಕಾಂಗ್ರೆಸ್ ರಾಜ್ಯ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ಕಷ್ಟವಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರೆಲ್ಲರೂ ಮುಂಬರುವ ಚುನಾವಣೆಯಲ್ಲಿ 150 ಕ್ಕಿಂತ ಒಂದು ಸ್ಥಾನವೂ ಕಡಿಮೆ ಗೆಲ್ಲಬಾರದು’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟಾರ್ಗೆಟ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅವರು ಕೆಪಿಸಿಸಿ ಆಡಿಟೋರಿಯಂನಲ್ಲಿ ಶುಕ್ರವಾರ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಕ್ಷ ಹೇಗೆ ಮುಂಬರುವ ಚುನಾವಣೆಯನ್ನು ಎದುರಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು; ‘ಈಗ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದು ಜನರಿಂದ ಆಯ್ಕೆಯಾದ ಪರಿಪೂರ್ಣ ಸರ್ಕಾರವಲ್ಲ. ಹಣದ ಬಲದಿಂದ ರಚನೆಯಾಗಿರುವ ಅನೈತಿಕ ಸರ್ಕಾರ.

ನಾವು ಮುಂಬರುವ ಚುನಾವಣೆಯನ್ನು ಅಲ್ಪ ಅಂತರದಿಂದ ಗೆಲ್ಲಬಾರದು. ನಾವು ಕನಿಷ್ಠಪಕ್ಷ 150 ಸ್ಥಾನವನ್ನು ಗೆಲ್ಲುವ ಗುರಿ ಇಟ್ಟುಕೊಂಡು ಸಾಗಬೇಕು. ನಾವು ಒಟ್ಟಾಗಿ, ಸರಿಯಾದ ವಿಚಾರ ಇಟ್ಟುಕೊಂಡು ಹೋರಾಟ ಮಾಡಿದರೆ ಇದು ಕಷ್ಟವಲ್ಲ. ನಾವು ಪಕ್ಷದ ಸೇವೆ ಮಾಡಿದವರನ್ನು ಪ್ರೋತ್ಸಾಹಿಸುತ್ತೇವೆ. ಕರ್ನಾಟಕದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ, ಯಾರೂ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ನಾವು ಈ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿ ಇರುತ್ತೇವೆ. ನಾವು ಟಿಕೆಟ್ ನೀಡುವಾಗ ಪಕ್ಷದ ಸೇವೆಯನ್ನು ಗಮನಿಸಿ ನೀಡುತ್ತೇವೆ. ಅವರು ಪಕ್ಷಕ್ಕೆ ಪ್ರಾಮಾಣಿಕವಾಗಿದ್ದು, ಪಕ್ಷದ ಪ್ರತಿನಿಧಿಯಾಗಿದ್ದರೆ ಅವರಿಗೆ ಸೂಕ್ತ ಅವಕಾಶ ಸ್ಥಾನಮಾನ ನೀಡಲಾಗುವುದು. ನಾನು ಮೂರು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ನಾವು 150 ಸ್ಥಾನ ಗೆಲ್ಲುವ ಗುರಿ ಹೊಂದಬೇಕು, ಪಕ್ಷಕ್ಕೆ ದುಡಿದವರಿಗೆ ಆದ್ಯತೆ ನೀಡಬೇಕು, ಮೆರಿಟ್ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು. ನಾವು ನಮ್ಮ ಕಾರ್ಯಕರ್ತರಿಗೆ ಸೂಕ್ತವಾದ ಮಾನ್ಯತೆ ನೀಡಬೇಕು. ನಾವು ಅಧಿಕಾರಕ್ಕೆ ಬಂದ ನಂತರ ಅವರಿಗಾಗಿ ಕೆಲಸ ಮಾಡಬೇಕು. ಇದಿಷ್ಟು ಸಂಘಟನೆ ವಿಚಾರ. ಇನ್ನು ದೇಶದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವಿಚಾರದ ಬಗ್ಗೆ ಮಾತನಾಡುವುದಾದರೆ, ದೇಶ ಹಾಗೂ ರಾಜ್ಯದ ಮುಂದೆ ನಿರುದ್ಯೋಗ ಸಮಸ್ಯೆ ದೊಡ್ಡದಾಗಿದೆ. ದೇಶದ ಆರ್ಥಿಕತೆ ಹಾಳಾಗಿದೆ, ಬೆಲೆ ಏರಿಕೆ ಹೆಚ್ಚಾಗಿದೆ. ನಮ್ಮ ಶಕ್ತಿಯಾಗಿದ್ದ ಆರ್ಥಿಕತೆ ದುರ್ಬಲವಾಗಿದೆ. ಇದೆಲ್ಲವೂ ನಮ್ಮ ಮುಂದಿರುವ ಸವಾಲು.

ನೋಟು ರದ್ಧತಿ, ಕೆಟ್ಟ ಜಿಎಸ್ ಟಿ ಪದ್ಧತಿ, ಕರಾಳ ಕೃಷಿ ಕಾಯ್ದೆಯಿಂದ ದೇಶಕ್ಕೆ ನಷ್ಟವಾಗಿದೆ. ಈಗಿನ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಕಾರಣ, ಉದ್ಯೋಗ ನೀಡುವ ಶಕ್ತಿಯಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ನಾಶ ಮಾಡಿದೆ. ಇಂದಿನ ಭಾರತ ತನ್ನ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ದೇಶಕ್ಕೆ ನಷ್ಟವಾಗಿದ್ದು, ಮುಂದೆ ಇನ್ನು ಅಪಾಯ ಎದುರಾಗಲಿದೆ. ಈ ವಿಚಾರಗಳ ಬಗ್ಗೆ ಬಿಜೆಪಿ ಎಂದೂ ಮಾತನಾಡುವುದಿಲ್ಲ. ಮೊದಲು ಮೋದಿ ಅವರು ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇಂದು ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಶೇ. 40 ಕಮಿಷನ್ ಭ್ರಷ್ಟಾಚಾರ ಸರ್ಕಾರದ ಬಗ್ಗೆ ಹೇಳಿ, ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಇಡೀ ರಾಜ್ಯವೇ ನಗಲಿದೆ. ದೇಶದ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಇದು 40% ಸರ್ಕಾರ ಎಂದು ನಾವು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಹೇಳುತ್ತಿದೆ. ಆದರೆ ಮೋದಿ ಅವರು ಬಂದು ಭ್ರಷ್ಟಾಚಾರದ ವಿರುದ್ದ ಮಾತನಾಡಿದರೆ ಅದೊಂದು ಅಪಹಾಸ್ಯವಾಗಲಿದೆ. ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಭ್ರಷ್ಟಾಚಾರ ವಿರುದ್ದ ಹೋರಾಡುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಕರ್ನಾಟಕದ ಯಾವುದೇ ಬಿಜೆಪಿ ನಾಯಕ, ರಾಷ್ಟ್ರೀಯ ನಾಯಕರು ನಿರುದ್ಯೋಗ, ಆರ್ಥಿಕತೆ, ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಲು ಸಾಧ್ಯವಿಲ್ಲ. ಬಿಜೆಪಿಯ ಉದ್ದೇಶ ಬಡವರ ಹಣವನ್ನು ಕಿತ್ತುಕೊಂಡು ದೊಡ್ಡ ಉದ್ಯಮಿಗಳಿಗೆ ನೀಡುವುದಾಗಿದೆ. ಇವರು ಕೆಲವು ಉದ್ಯಮಿಗಳಿಗೆ ಹಣ ಸಂದಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಒಡೆದು ಈ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಧರ್ಮಗಳ ನಡುವೆ, ಜಾತಿಗಳ ನಡುವೆ ಸಂಘರ್ಷ ತರುತ್ತಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ನಿಜವಾದ ಜವಾಬ್ದಾರಿ ಏನು ಎಂದರೆ, ರಾಜ್ಯ ಹಾಗೂ ದೇಶಕ್ಕೆ ಅಗತ್ಯವಿರುವ ವಿಚಾರಗಳನ್ನು ಎತ್ತುವುದಾಗಿದೆ. ಉದ್ಯೋಗ ನೀಡುವುದು, ಆರ್ಥಿಕತೆ ಸರಿಪಡಿಸುವುದು, ದೇಶದ ವಿವಿಧ ಸಮುದಾಯದವರನ್ನು ಒಟ್ಟಿಗೆ ತರುವುದಾಗಿದೆ. ಬಿಜೆಪಿ ಕೆಲಸ ಒಡೆಯುವುದಾದರೆ, ನಮ್ಮ ಕೆಲಸ ಒಂದುಗೂಡಿಸುವುದಾಗಿದೆ. ಇದನ್ನು ಕರ್ನಾಟಕದಲ್ಲಿ ಮಾಡಿ ತೋರಿಸಬೇಕಿದೆ. ದೇಶದಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಮಾಡಿರುವ ರಾಜ್ಯ ಕರ್ನಾಟಕವಾಗಿದೆ. 70 ಲಕ್ಷ ಸಂಖ್ಯೆಯಲ್ಲಿ ಬಹುತೇಕರು ಯುವಕರಾಗಿದ್ದಾರೆ. ನಾವು ಈ ಚುನಾವಣೆಯಲ್ಲಿ ಎರಡು ವಿಚಾರದ ಬಗ್ಗೆ ಗಮನಹರಿಸಬೇಕಿದೆ. ಒಂದು ಯುವಕರು ಮತ್ತೊಂದು ಮಹಿಳೆಯರು. ನಾವು ಟಿಕೆಟ್ ನೀಡುವುದಾಗಿರಲಿ, ಸಂಘಟನೆ ಮಾಡುವುದರಲ್ಲಾಗಲಿ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಬೇಕು. ಪ್ರಮುಖ ವಿಚಾರವಾಗಿ ಹೋರಾಡಬೇಕು, ಬಿಜೆಪಿಯ ಸುಳ್ಳನ್ನು ಜನರ ಮುಂದೆ ಇಡಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಅತ್ಯುತ್ತಮ ಪ್ರಗತಿ ಸಾಧಿಸಿತ್ತು. ಇದನ್ನು ನಾವು ಜನರಿಗೆ ತಿಳಿಸಬೇಕು. ನಾವು ಏನು ಮಾಡಿದ್ದೆವು, ಮುಂದೆ ಏನು ಮಾಡುತ್ತೇವೆ ಎಂದು ಹೇಳಬೇಕು.

150 ಕ್ಕಿಂತ ಒಂದು ಕ್ಷೇತ್ರವೂ ಕಡಿಮೆ ಆಗಬಾರದು. ಇನ್ನು ನಮ್ಮ ಎಲ್ಲ ಹಿರಿಯ ನಾಯಕರನ್ನು ನಾನು ಸಾಕಷ್ಟು ಬಲ್ಲೆ. ನೀವು ಎಲ್ಲರೂ ಒಟ್ಟಾಗಿ ಹೋರಾಡಲೇಬೇಕು. ಇದು ನಿಮ್ಮ ಬಹುದೊಡ್ಡ ಜವಾಬ್ದಾರಿ. ನೀವದನ್ನು ಮಾಡುತ್ತಿದ್ದು, ನೀವೆಲ್ಲರೂ ಸೇರಿ 150 ಸೀಟು ತರಬೇಕು. ನೀವು ಯಾವಾಗ ಬಯಸುತ್ತೀರೋ ಆಗ ಎಲ್ಲಿ ಬೇಕಾದರೂ ನಾನು ಬರುತ್ತೇನೆ. ನಮ್ಮ ಬಳಿ ಹೆಚ್ಚು ಸಮಯವಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ನಾವು ಯಾವ ರೀತಿ ಸರ್ಕಾರ ಮಾಡಬೇಕು ಎಂದರೇ, ಬಡವರು, ದುರ್ಬಲರು, ಸಣ್ಣ ಉದ್ದಿಮೆದಾರರಿಗೆ ಶಕ್ತಿ ತುಂಬಿ ರಾಜ್ಯವನ್ನು ಮತ್ತೆ ಪ್ರಗತಿಯ ಹಾದಿಗೆ ತರಬೇಕು.’

Leave a Comment

Your email address will not be published. Required fields are marked *

Translate »
Scroll to Top