ರಘುನಂದನ್ ರಾಮಣ್ಣ ಅವರಿಗೆ ರಾಹುಲ್ ಗಾಂಧಿ ಅಭಿನಂದನೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ದಾಖಲೆಯ 75 ಲಕ್ಷ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಮಾಡಿರುವ ಎಐಸಿಸಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಕರ್ನಾಟಕದ ಮುಖ್ಯಸ್ಥ ರಘುನಂದನ್ ರಾಮಣ್ಣ ಅವರನ್ನು ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರು ಅಭಿನಂದಿಸಿದ್ದಾರೆ. ಕರ್ನಾಟಕದಲ್ಲಿ ಆಗಿರುವ 75 ಲಕ್ಷ ಸದಸ್ಯತ್ವ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣವಾಗಿದೆ. ಕರ್ನಾಟಕದಲ್ಲಿ ಡಿಜಿಟಲ್ ಸದಸ್ಯತ್ವ ಕಳೆದ ಫೆ. 4 ರಂದು ಶುರುವಾಗಿದ್ದು, ರಾಜ್ಯದ ಎಲ್ಲ ಬೂತ್ ಗಳಲ್ಲಿನ ನಾಯಕರು, ಕಾರ್ಯಕರ್ತರ ಸಹಕಾರದಿಂದ ಅಲ್ಪಾವಧಿಯಲ್ಲಿ ಇಡೀ ದೇಶದಲ್ಲೇ ದಾಖಲೆ ನಿರ್ಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು, ಸದಸ್ಯತ್ವ ಅಭಿಯಾನದ ತರಬೇತಿ, ಪ್ರಗತಿ ಪರಿಶೀಲನೆ ಜತೆಗೆ ನಿರಂತರ ಜೂಮ್ ಸಭೆಗಳನ್ನು ನಡೆಸಿದ್ದರು.

ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಅತ್ಯಂತ ಸುಧಾರಿತ, ಸುಸಜ್ಜಿತ ತಂತ್ರಜ್ಞಾನವನ್ನು ಬಳಕೆ ಮಾಡಿ, ಕಾರ್ಯಕರ್ತರು ಹಾಗೂ ಮತದಾರರ ಸಂಪರ್ಕ ಸಾಧಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ನೋಂದಣಿದಾರರು ಅವಿರತ ಶ್ರಮಿಸುವ ಮೂಲಕ ಕರ್ನಾಟಕದಲ್ಲಿ ಈ ಸಾಧನೆಗೆ ಕಾರಣರಾಗಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಜವಾಬ್ದಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರು ಆಗಿರುವ ರಘುನಂದನ್ ರಾಮಣ್ಣ ಅವರಿಗೆ ವಹಿಸಲಾಗಿತ್ತು. ತಮ್ಮನ್ನು ಭೇಟಿ ಮಾಡಿದ ರಾಮಣ್ಣ ಅವರ ಈ ಸಾಧನೆಯನ್ನು ರಾಹುಲ್ ಗಾಂಧಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top