ಬೆಂಗಳೂರು : ಸ್ಯಾಂಡಲ್ವುಡ್ನ ನಟ ಸಾರ್ವಭೌಮ, ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಮಾತ್ರ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಮುಂಜಾನೆ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11-30ಕ್ಕೆ ಪುನೀತ್ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮಕ್ಕಳಾದ ವಂದಿತಾ, ಧ್ರುತಿ , ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನುಅಗಲಿದ್ದಾರೆ. ಶಾಲೆಗೆ ಹೋಗುವ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಅಣ್ಣಾವ್ರ ವಂಶದ ಕುಡಿ ಈ ಪವರ್ ಸ್ಟಾರ್. 1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು.
ಯಾವುದೇ ಪಾತ್ರಗಳನ್ನಾದರೂ ನೀರು ಕುಡಿದಷ್ಟು ಸುಲಭವಾಗಿ ಅಭಿನಯಿಸುವ ಈ ನಟ ಕನ್ನಡ ಸಿನಿ ರಂಗದಲ್ಲಿ 45 ವರ್ಷಗಳನ್ನು ಕಳೆದಿದ್ದಾರೆ. 46 ವರ್ಷದ ನಟ ಪುನೀತ್ ರಾಜ್ಕುಮಾರ್ ಅವರು ಪುನೀತ್ ಒಂಭತ್ತು ತಿಂಗಳ ಮಗುವಾಗಿರುವಾಗಲೇ ರಾಜ್ಕುಮಾರ್ ಅವರ ಅಭಿನಯದ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಅಭಿನಯಿಸಿದ್ದರು. 1975 ಮಾರ್ಚ್ 17ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ, 1976 ಫೆಬ್ರವರಿ 28ರಂದು ತೆರೆಕಂಡಿತ್ತು. ವಿ. ಸೋಮಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ಆರತಿ, ಜಯಮಾಲ ಅಭಿನಯಿಸಿದ್ದರು. ಜಯದೇವಿ ಫಿಲ್ಸ್ಮ್ ಅಡಿ ನಿರ್ಮಾಣವಾಗಿದ್ದ ಈ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.
ಈ ಸಿನಿಮಾದಲ್ಲಿ ಪುನೀತ್ಗೆ ಅವಕಾಶ ಸಿಕ್ಕಿದ್ದೂ ಒಂದು ಆಶ್ಚರ್ಯ. ಈ ಸಿನಿಮಾದಲ್ಲಿ ರಾಜಣ್ಣನ ಮಗುವಾಗಿ ಅಭಿನಯಿಸಲು ಮಕ್ಕಳನ್ನು ಕರೆತರಲಾಗಿತ್ತು. ಚಿತ್ರೀಕರಣ ಆರಂಭವಾದರೂ ಮಕ್ಕಳು ಅಳು ನಿಲ್ಲಿಸುತ್ತಿರಲಿಲ್ಲವಂತೆ. ಇದರಿಂದಾಗಿ ಸೆಟ್ನಲ್ಲೇ ಇದ್ದ ಪಾರ್ವತಮ್ಮ ಅವರ ಬಳಿಯಿದ್ದ ಪುನೀತ್ರನ್ನು ಅಣ್ಣಾವ್ರು ಕೇಳಿ ಸಿನಿಮಾದಲ್ಲಿ ಇವನ್ನನ್ನೇ ಎತ್ತುಕೊಂಡು ಚಿತ್ರೀಕರಿಸಲು ಪ್ರಯತ್ನಿಸೋಣ ಎಂದಿದ್ದರಂತೆ. ಇಲ್ಲಿಂದ ಅಪ್ಪು ಸಿನಿ ಜರ್ನಿ ಆರಂಭವಾಗಿತ್ತು.ನಂತರ ರಾಜಣ್ಣನ ಜತೆ ಪುನೀತ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
1985ರಲ್ಲಿ ಪುನೀತ್ ಅಭಿನಯದ ‘ಬೆಟ್ಟದ ಹೂವು’ ಸಿನಿಮಾದಲ್ಲಿನ ಅಭಿನಯಕ್ಕೆ ಅಪ್ಪುಗೆ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಪುನೀತ್ ನಿಜವಾದ ಹೆಸರು ಲೋಹಿತ್. ಡಾ. ರಾಜ್ ಅಭಿನಯದ ‘ಪರಶುರಾಮ’ ಸಿನಿಮಾದಲ್ಲಿ ಅಭಿನಯಿಸುವಾಗ ಅಪ್ಪು ಹೆಸರನ್ನು ಪುನೀತ್ ಎಂದು ಬದಲಾಯಿಸಲಾಯಿತು.
ಇನ್ನು, ಅಪ್ಪು ಎಂದು ಅವರನ್ನು ಮನೆಯಲ್ಲಿ ಮುದ್ದಾಗಿ ಕರೆಯಲಾಗುತ್ತದೆ. ಅದೇ ಹೆಸರನ್ನು ಅವರು ನಾಯಕನಾಗಿ ಅಭನಯಿಸಿದ ಮೊದಲ ಚಿತ್ರ ಇಡಲಾಗಿತ್ತು. 2002ರಲ್ಲಿ ತೆರೆಕಂಡ ಅಪ್ಪು ಸಿನಿಮಾ ಮೂಲಕ ಪುನೀತ್ ಪೂರ್ಣ ಪ್ರಮಾಣದ ನಟನಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 25 ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಅಭಿ ಸಿನಿಮಾದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ‘ಬಿಂದಾಸ್’, ‘ರಾಜಕುಮಾರ’, ‘ದೊಡ್ಮನೆ ಹುಡ್ಗ’, ‘ಹುಡುಗರು’, ‘ಜಾಕಿ’, ‘ನಿನ್ನಿಂದಲೇ’, ‘ನಟಸಾರ್ವಭೌಮ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪುನೀತ್ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಅವರ ಅಭಿನಯದ ಯುವರತ್ನ ತೆರೆ ಕಂಡಿತ್ತು. ಕವಲುದಾರಿ, ಮಾಯಾ ಬಜಾರ್ ಸಿನಿಮಾಗಳನ್ನು ತಮ್ಮ ಹೋಂ ಬ್ಯಾನರ್ ಪಿಆರ್ಕೆ ಪ್ರೊಡಕ್ಷನ್ಸ್ ಅಡಿ ನಿರ್ಮಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ.ಪುನೀತ್ ಅವರ ಕೈಯಲ್ಲಿ ಸದ್ಯ ಎರಡು ಸಿನಿಮಾಗಳಿದ್ದವು. ಒಂದು ಜೇಮ್ಸ್ ಹಾಗೂ ಮತ್ತೊಂದು ದ್ವಿತ್ವ. ಜೇಮ್ಸ್ ಇನ್ನೂ ಚಿತ್ರೀಕರಣದ ಹಂತದಲ್ಲಿದ್ದು, ದ್ವಿತ್ವ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಲೂಸಿಯಾ ಪವನ್ ಕುಮಾರ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಕೆಲ ಸಮಯದ ಹಿಂದೆಯಷ್ಟೆ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು.