ಬೆಂಗಳೂರು: ಮಕರ ಸಂಕ್ರಾಂತಿ ಅಂಗವಾಗಿ ಕೂಡ್ಲು ಸಿಂಗ ಸಂದ್ರದ ಎ ಇ ಸಿ ಎಸ್ ಲೇ ಔಟ್ ” ಎ ” ಬ್ಲಾಕ್ ನ ಮಹಾಗಣಪತಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ, ಹಿರಿಯ ನಾಗರಿಕರನ್ನು ವಿವಿಧ ರೀತಿಯಲ್ಲಿ ಸೈಬರ್ ಅಪರಾಧಗಳು, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಮತ್ತಿತರೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಾಮಾರಿಸುವ ಕುರಿತು ಎಸಿಪಿ ಡಾ. ಗೋವಿಂದ್ರನ್ ಗೋಪಾಲ್ ನೇತೃತ್ವದ ಸೈಬರ್ ಪರಿಣಿತರ ತಂಡ ಅತ್ಯಂತ ಉಪಯುಕ್ತ ಮಾಹಿತಿ ನೀಡಿತು.
ನ್ಯೂಸ್ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ. ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು. ಜೀವನಶೈಲಿ ಮತ್ತು ಯೋಗಕ್ಷೇಮ ನಿರ್ವಹಣಾ ತಜ್ಞರಾದ ಡಾ. ಮಾನಸ ಮತ್ತಿತರರು ಉಪಸ್ಥಿತರಿದ್ದರು.
ಇಡೀ ದಿನ ಯಕ್ಷಗಾನ, ಸಿಪಿಆರ್ ತರಬೇತಿ, ಉಚಿತ ವೈದ್ಯಕೀಯ ಶಿಬಿರ, ಅಗ್ನಿಶಾಮಕ ಕವಾಯತು, ಸಿಲಿಂಡರ್ ಸ್ಪೋಟದ ಬಗ್ಗೆ ಮುಂಜಾಗ್ರತಾ ಕ್ರಮಗಳು, ಮಕ್ಕಳಿಗಾಗಿ ಚಿತ್ರಕಲೆ, ರಂಗೋಲಿ ಸ್ಪರ್ಧೆ, ನೃತ್ಯ ಹಾಗು ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.