ಪಿಎಸ್ಐ ಅಕ್ರಮ ನೇಮಕಾತಿ ಹಗರಣ : ತನಿಖೆಗೆ ಆದೇಶಿಸಿದ ಸರ್ಕಾರ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಹಾಗೂ ದೊಡ್ಡ ದೊಡ್ಡ ಕುಳಗಳ ತಲೆದಂಡಕ್ಕೆ ಕಾರಣ ಆಗಬಹುದಾದ 545 ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

 

ಮಾಜಿ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರ ಅವಧಿಯ ಸರ್ಕಾರದಲ್ಲಿ ವ್ಯಾಪಕವಾಗಿ ಸದ್ದು ಮಾಡಿದ್ದ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಲು ಬಿ.ವೀರಪ್ಪ ನೇತೃತ್ವದ ಏಕ ಸದಸ್ಯ ಪೀಠಕ್ಕೆ ಕರ್ನಾಟಕ ಸರ್ಕಾರ ಸೂಚಿಸಿದೆ.

ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಬೃಹತ್‌ ಹೋರಾಟವನ್ನೇ ನಡೆಸಿತ್ತು. ಕಾಂಗ್ರೆಸ್ ಸರ್ಕಾರ ಬಂದರೆ ತಪ್ಪದೇ ಇದರ ತನಿಖೆ ನಡೆಸುತ್ತೇವೆ ಎಂದೇ ಕಾಂಗ್ರೆಸ್ ಪಕ್ಷ ಹೇಳಿಕೊಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದ ದಿನದಿಂದಲೂ ಪಿಎಸ್ಐ ನೇಮಕಾತಿ ಹಗರಣದ ತನಿಖೆಯ ಬಗ್ಗೆ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಈಗ ಸರ್ಕಾರ ತನಿಖೆಗೆ ಆದೇಶಿಸಿದೆ.

 

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಜನವರಿ 21, 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್‌ 3, 2021 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಿತ್ತು.

ಈಗಾಗಲೇ ನಡೆದ ತನಿಖೆ ಹಿನ್ನೆಲೆಯಲ್ಲಿ 52 ಅಭ್ಯರ್ಥಿಗಳ ಅಕ್ರಮ ಸಾಭೀತಾಗಿದೆ. ಇದರ ಜೊತೆಗೆ ಅನೇಕ ರಾಜಕೀಯ ವ್ಯಕ್ತಿಗಳ ಭಾಗಿಯ ಬಗ್ಗೆಯೂ ತನಿಖೆ ನಡೆಸಲಾಗಿದೆ. 52 ಅಭ್ಯರ್ಥಿಗಳು ಒಳಗೊಂಡಂತೆ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಹೆಚ್ಚುವರಿ ತನಿಖೆಯನ್ನು ಮುಂದುವರಿಸಲಾಗಿದೆ.

 

ಗಂಭೀರ ಸ್ವರೂಪದ ಪ್ರಕರಣ ಇದಾಗಿದ್ದು, ಸಾರ್ವಜನಿಕ ಮಹತ್ವವುಳ್ಳ ವಿಷಯವಾಗಿರುವುದರಿಂದ, ಇನ್ನುಮುಂದೆ ನಡೆಯುವ ಪೊಲೀಸ್ ನೇಮಕಾತಿಗಳು ಅತ್ಯಂತ ಪಾರದರ್ಶಕವಾಗಿ ನಡೆಸುವ ಅಗತ್ಯವಿರುವುದರಿಂದ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಯ ಅಗತ್ಯವಿರುವುದನ್ನು ಮನಗಂಡು Commission of enquiry act 1952ರ ನಿಯಮ 3ರ ಉಪ ನಿಯಮ ರನ್ವಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ನಿರ್ಧರಿಸಿ, ಈಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಬಹುಶಃ ತನಿಖೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಹಲವು ಮಂದಿ ಇದರಲ್ಲಿ ಭಾಗಿ ಆಗಿರಬಹುದು ಎನ್ನಲಾಗಿದೆ. ಅಷ್ಟೆ ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಪ್ತ ವಲಯದವರೂ ಸಹ ಈ ಪ್ರಕರಣದಲ್ಲಿ ಭಾಗಿ ಆಗಿರುವ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. 3 ತಿಂಗಳ ಅವಧಿಯಲ್ಲಿ ಸಿದ್ದವಾಗುವ ವರದಿಯಲ್ಲಿ ಯಾರ್ಯಾರು ಭಾಗಿ ಆಗಿರಬಹುದು ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top