ಮರಿಯಮ್ಮನಹಳ್ಳಿ,ಜ,8 : ಕೊರೊನಾ ಮತ್ತು ಓಮಿಕ್ರಾನ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿರುವ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಹುತೇಕ ಕಾರ್ಯ ಚಟುವಟಿಕೆಗಳು ಚುರುಕಿನಿಂದ ಸಾಗಿದ್ದವು. ದೂರದ ಊರುಗಳು ಮತ್ತು ಗ್ರಾಮೀಣ ಪ್ರದೇಶಕ್ಕೆ ಬಸ್ ಗಳು ಓಡಿದವು. ಆದರೆ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಇಡೀ ಪಟ್ಟಣವು ಏಕ್ದಮ್ ಸ್ಥಗಿತಗೊಂಡಿತ್ತು. ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಇತರೆ ಸಾರಿಗೆ ಮತ್ತು ಆಟೋಗಳು ಬೆಳಗ್ಗೆಯಿಂದ ಎಂದಿನಂತೆ ಚಲಿಸಿದವು. ಪಟ್ಟಣದ ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿಗಳು, ನಾಣಿಕೆರೆ ವೃತ್ತದಲ್ಲಿನ ಮಾರುಕಟ್ಟೆಗಳು ಎಂದಿನಂತೆ ನಡೆದವು. ಜನರಂತೂ ಕಾಯಿಪಲ್ಲೆ ಖರೀದಿ ಭರ್ಜರಿಯಾಗಿ ನಡೆಸಿದರು. ಈ ವೇಳೆಯಲ್ಲಿ ಜನರ ಸಾಮಾಜಿಕ ಅಂತರ ಮಾಯವಾಗಿತ್ತು. ಅದೂ ಅಲ್ಲದೆ ಬೆಳಗ್ಗೆಯಿಂದಲೇ ಹೋಟೆಲ್ ಗಳು ತೆರೆದುಕೊಂಡಿದ್ದವು. ಮಧ್ಯಾಹ್ನದವರೆಗೂ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಮುಂದುವರಿಸಿದ್ದವು. ಕೆಲವು ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮೀಸಲಿಡಲಾಗಿತ್ತು. ಮಧ್ಯಾಹ್ನ ಬದಲಾಯ್ತು ಪಟ್ಟಣ. ಏಕಾಏಕಿಯಾಗಿ ಸ್ತಬ್ಧವಾಯಿತು. ಬಹುತೇಕ ರಸ್ತೆಗಳು ನಿರ್ಜನಗೊಂಡವು. ಮುಖ್ಯ ರಸ್ತೆಯಲ್ಲಿ ಜನರು ಓಡಾಡುವುದನ್ನು ಬಿಟ್ಟರೆ, ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲ್ಪಟ್ಟವು.

ಬೀದಿ ಬದಿ ವ್ಯಾಪಾರಿಗಳ ವಹಿವಾಟು ಬಹುತೇಕ ಬಂದ್ ಯಿತು. ಇದ್ದಕ್ಕಿದ್ದಂತೆ ಕರ್ಫ್ಯೂ ಎನ್ನುವುದು ಮಧ್ಯಾಹ್ನ ಕಾಣಲಾರಂಭಿಸಿತು. ಪಟ್ಟಣದ ಬಸ್ ನಿಲ್ದಾಣಗಳಲ್ಲಿ ಜನ ಗುಂಪು ಗುಂಪಾಗಿ ನಿಂತು ಸಾರಿಗೆಗಾಗಿ ಕಾಯುವುದು ಕಂಡು ಬಂತು. ಅದೂ ಅಲ್ಲದೆ, ಪಟ್ಟಣದಿಂದ ಖಾಸಗಿ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರು ಕೂಡ ವಾಹನಗಳಿಗಾಗಿ ಪರಿತಪಿಸಿದ್ದು ಕಂಡುಬಂತು. ರಸ್ತೆಗಳಲ್ಲಿ ಕೇವಲ ದ್ವಿಚಕ್ರ ವಾಹನದ ಸವಾರರು, ಆಟೋ ಮತ್ತು ಕಾರುಗಳ ಓಡಾಟ ಸೀಮಿತವಾಯಿತು. ನಾಣಿಕೆರೆ ವೃತ್ತದಲ್ಲಿ ಪೋಲಿಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ ಪಿ.ಎಸ್.ಐ.ಹನುಮಂತಪ್ಪ ತಳವಾರ್ ರವರು ದಂಡ ವಿಧಿಸಿ ಅವರಿಗೆ ಉಚಿತವಾಗಿ ಮಾಸ್ಕ್ ಗಳನ್ನು ನೀಡಿದರು. ಅಲ್ಲದೇ ಅನಾವಶ್ಯಕವಾಗಿ ಬೈಕ್ ಗಳಲ್ಲಿ ಓಡಾಡುವರನ್ನು ತಡೆದು ದಂಡವನ್ನು ವಿಧಿಸಿ ಬೈಕ್ ಗಳನ್ನು ಠಾಣೆಗೆ ತೆಗೆದುಕೊಂಡು ಹೋದರು. ಈ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಸಿಬ್ಬಂದಿ ಎ.ಎಸ್.ಐ.ಗಳಾದ ಮುರಾರಿ, ಠಾಕೂರ್ ನಾಯ್ಕ, ನಿರಂಜನ್ ಗೌಡ, ಪೇದೆಗಳಾದ ಗುರು, ಸಂಜೀವ್ ಮೂರ್ತಿ ಇತರರಿದ್ದರು.
