ಮಂಗಳೂರು : ನಗರದ ಸೈಂಟ್ ಜೆರೋಸಾ ಶಾಲೆಯಲ್ಲಿ ಮಂಗಳವಾರದ ದಿನ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಪ್ರತಿಭಟನೆಗೆ ಕಾರಣಕರ್ತರಾದ ಶಾಸಕ ವೇದವ್ಯಾಸ ಕಾಮತ್ ಅವರ ನಡೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಶಾಲೆಯ ಶಿಕ್ಷಕಿಯೊಬ್ಬರು ಏಳನೇ ತರಗತಿಯ ‘ವರ್ಕ್ ಈಸ್ ವರ್ಷಿಪ್ ‘ ಪಾಠವನ್ನು ಮಾಡುವಾಗ ಹಿಂದೂ ಧರ್ಮದ ದೇವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಂಗಳವಾರ ಶಾಲೆಗೆ ವಿ.ಎಚ್.ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಚೋದಿಸಿ ಶಾಲೆಯ ವಿರುದ್ಧ ಪ್ರತಿಭಟನೆ ನಡೆಸುವಂತೆ ಮಾಡಿದ್ದರು .ಈ ಪ್ರಚೋದನೆಯ ವಿಡಿಯೋ ನಿನ್ನೆ ವೈರಲ್ ಆಗಿತ್ತು.
ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರು ಶಾಲೆಗೆ ತೆರಳಿ ಶಾಲಾಡಳಿತ ಮಂಡಳಿ ಜೊತೆಗೆ ಚರ್ಚೆ ನಡೆಸಿದ್ದರು .
ಪ್ರತಿಭಟನೆಯ ಬಳಿಕ ಶಾಲೆಯ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿ ವಜಾ ಮಾಡಿತ್ತು.
ಮಾತುಕತೆಯಲ್ಲಿ ಬಗೆಹರಿಸಬಹುದಾಗಿದ್ದ ಪ್ರಕರಣಕ್ಕೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಬೀದಿ ರಂಪ ನಡೆಸಲು ಕಾರಣಕರ್ತರಾಗಿದ್ದರು ಎಂದು ವಿವಿಧ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಿಯೋಗ ಭೇಟಿ:
ಶಾಲೆಗೆ ಇಂದು ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿ ನೀಡಿ ಶಾಲಾಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿತು. ಮಾಜಿ ಸಚಿವ ರಮಾನಾಥ ರೈ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶಾಲೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿ , ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಶಾಸಕ ವೇದವ್ಯಾಸ ಕಾಮತ್ ಅವರು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಪ್ರತಿಭಟನೆ ನಡೆಸಿರುವುದು ಖಂಡನೀಯ , ಈ ಬಗ್ಗೆ ಕೂಡ ತನಿಖೆ ನಡೆಯಲಿ ರಮಾನಾಥ ರೈ ಹಾಗೂ ವಿನಯ ಕುಮಾರ್ ಅವರು ಒತ್ತಾಯಿಸಿದರು.
ಕಾಂಗ್ರೆಸ್ ವಕ್ತಾರೆ ಯು.ಟಿ.ಫರ್ಜಾನಾ ಅವರು ಮಾತನಾಡಿ, ಶಾಸಕ ಕಾಮತ್ ಅವರು ಶಾಲೆಯ ಮಕ್ಕಳು ಭೀತಿಯಿಂದ ಶಾಲೆಗೆ ಬರುವಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ ಹಾಗೂ ಶಾಲೆಯ ಮಕ್ಕಳನ್ನು ದುಷ್ಕೃತ್ಯಕ್ಕೆ ಪ್ರೇರೇಪಿಸಿದ್ದಾರೆ ಎಂದು ದೂರಿದರು.
ಸಿ.ಪಿ.ಎಂ – ಡಿ.ವೈ.ಎಫ್.ಐ ಖಂಡನೆ :
ಜೊರೋಶಾ ಶಾಲೆಯ ಎದುರು ಶಾಸಕ ವೇದವ್ಯಾಸ ಕಾಮತ್ ಅವರು ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟನೆಗೆ ಪ್ರಚೋದನೆ ನೀಡಿರುವುದು ಖಂಡನೀಯ ಎಂದು ಡಿ.ವೈ.ಎಫ್.ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಹೇಳಿದ್ದಾರೆ .
ಶಾಸಕ ಕಾಮತ್ ಅವರ ನಡೆಯನ್ನು ಸಿ.ಪಿ.ಎಂ.ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಹಾಗೂ ಸಂತೋಷ್ ಬಜಾಲ್ ಅವರು ಖಂಡಿಸಿದ್ದಾರೆ. ಶಿಕ್ಷಕಿಯ ತಪ್ಪಿದ್ದರೆ ಶಿಕ್ಷಕಿಯ ವಿರುದ್ಧ ಕ್ರಮ ಜರುಗಿಸಿ, ಅದನ್ನು ಬಿಟ್ಟು ಪ್ರಾಥಮಿಕ ಶಾಲಾ ಮಕ್ಕಳನ್ನು ಬೀದಿಗೆ ಬರುವಂತೆ ಪ್ರಚೋದಿಸಿ ಪ್ರತಿಭಟನೆ ನಡೆಸುವಂತೆ ಮಾಡುವುದು ಜವಾಬ್ದಾರಿಯುತ ಶಾಸಕನ ಕರ್ತವ್ಯ ಅಲ್ಲ ಎಂದವರು ಹೇಳಿದ್ದಾರೆ.