ಬಳ್ಳಾರಿ : ಬಳ್ಳಾರಿ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಅನೇಕ ಕಡೆ ಈ ಬಾರಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆಯನ್ನು ಬೆಳೆದಿದ್ದು, ರೈತರ ಹಿತಕಾಯಲು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿ, ಪ್ರತಿ ಕ್ವಿಂಟಾಲ್‍ಗೆ 3 ಸಾವಿರ ರೂ.ಗಳ ಬೆಂಬಲ ಬೆಲೆ ಅಡಿಯಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಎಐಕೆಕೆಎಂಎಸ್ ರೈತ ಸಂಘಟನೆ ಒತ್ತಾಯಿಸಿದೆ.
ಇಂದು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದ ಎಐಕೆಕೆಎಂಎಸ್ ಕಾರ್ಯಕರ್ತರು, ರಾಜ್ಯ ಸರ್ಕಾರದ ನಿರ್ಲಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಭಾಗದಲ್ಲಿ ಇತ್ತೀಚಿಗೆ ಕೆಲವು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಸರಿಯಾದ ಬೆಲೆ ಸಿಗದೇ ಇರುವ ಕಾರಣ, ಸಾಕಷ್ಟು ನಷ್ಟಕ್ಕೀಡಾಗಿದ್ದರು. ಇದರಿಂದಾಗಿ ಮೆಣಸಿನಕಾಯಿ ಬೆಳೆ ಬೆಳೆಯುವ ರೈತರು ಈ ಬಾರಿ ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. ಮುಂಗಾರಿನ ಪ್ರಾರಂಭದ ಹಂತದಲ್ಲಿ ಮೆಕ್ಕೆಜೋಳಕ್ಕೆ ಉತ್ತಮವಾಗಿದ್ದ ಬೆಲೆಯು ಈಗ ಬಹಳಷ್ಟು ಕುಸಿದಿದೆ ಎಂದು ಸಂಘಟನೆ ತಿಳಿಸಿದೆ.
ಜೊತೆಗೆ, ಇಂದು ಉತ್ಪಾದನಾ ವೆಚ್ಚವೂ ಸಹ ಬಹಳಷ್ಟು ಹೆಚ್ಚಾಗಿದ್ದು, ರೈತರು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ ಬೆಂಬಲ ಬೆಲೆಯು ರೈತರನ್ನು ಸಂಕಷ್ಟಗಳಿಂದ ಸ್ವಲ್ಪ ಪಾರು ಮಾಡುವಂತಿತ್ತು. ಆದರೆ ಸರ್ಕಾರದ ವತಿಯಿಂದ ನಡೆಯುವ ಬೆಳೆ ಖರೀದಿಯು ಸಹ ಸರಿಯಾದ ಸಮಯಕ್ಕೆ ನಡೆಯದಿರುವುದರಿಂದ, ಖಾಸಗಿ ವ್ಯಾಪಾರಸ್ಥರಿಗೆ, ದಲ್ಲಾಳಿಗಳಿಗೆ ನೇರವಾಗಿ ಅನುಕೂಲ ಮಾಡಿಕೊಟ್ಟಂತಿದೆ ಎಂದು ಮುಖಂಡರು ಹೇಳಿದರು.
ಆದುದರಿಂದ ಈ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದು ಅತ್ಯಂತ ಜರೂರಿನ ಕೆಲಸವಾಗಿದೆ. ಹಾಗೆಯೇ, ಮೆಕ್ಕೆಜೋಳ ಬೆಳೆ ಬೆಳೆಯಲು ಸುಮಾರು 40 ರಿಂದ 60 ಸಾವಿರ ರೂ.ಗಳ ವೆಚ್ಚವಾಗುತ್ತಿದೆ. ಮೆಕ್ಕೆಜೋಳ ಬೆಳೆಗೆ ಸಿ2+50% ಆಧಾರದಲ್ಲಿ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಎಐಕೆಕೆಎಂಎಸ್ ಜಿಲ್ಲಾ ಸಮಿತಿಯು ಮನವಿ ಮಾಡಿದೆ.
ಬೇಡಿಕೆಗಳು: ರಾಜ್ಯ ಸರ್ಕಾರವು ಈ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು, ಮೆಕ್ಕೆಜೋಳಕ್ಕೆ 3 ಸಾವಿರ ರೂ ಬೆಂಬಲ ಬೆಲೆ ನೀಡಿ, ಸರ್ಕಾರವೇ ಖರೀದಿಸಬೇಕು, ಪ್ರತಿಯೊಬ್ಬ ರೈತ ಬೆಳೆದ ಮೆಕ್ಕೆಜೋಳವನ್ನು ಸಂಪೂರ್ಣವಾಗಿ ಖರೀದಿಸಬೇಕು, ಇಂತಿμÉ್ಟೀ ಎಂಬ ಮಿತಿಯನ್ನು ತೆಗೆದುಹಾಕಬೇಕು, ರಾಜ್ಯದಲ್ಲಿ ರೈತರಿಂದ ಬೆಳೆ ಖರೀದಿಸಲು ಆವರ್ತ ನಿಧಿಯನ್ನು ಸ್ಥಾಪಿಸಬೇಕು ಎಂದು ಎಐಕೆಕೆಎಂಎಸ್ ಮುಖಂಡರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್ ಮತ್ತು ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಇವರು ವಹಿಸಿದ್ದರು.
ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ



