ಮೇ 30, 31ಕ್ಕೆ ಉತ್ಪಾದನಾ ಮಂಥನ್‌: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

Kannada Nadu
ಮೇ 30, 31ಕ್ಕೆ ಉತ್ಪಾದನಾ ಮಂಥನ್‌: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ಬೆಂಗಳೂರು: ಈ ತಿಂಗಳ ಅಂತ್ಯದಲ್ಲಿ ( ಮೇ 30 ಹಾಗೂ 31ಕ್ಕೆ) ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ʼಉತ್ಪಾದನಾ ಮಂಥನ್‌ʼ ಕುರಿತ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ʼಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸುವ ಮುನ್ನೋಟ ಕುರಿತ ಈ ಎರಡು ದಿನಗಳ ಚಿಂತನ – ಮಂಥನ ಸಮಾವೇಶದಲ್ಲಿ ಆಯ್ದ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಉದ್ಯಮ ದಿಗ್ಗಜರ ಜೊತೆಗಿನ ವಿಚಾರ ಮಂಥನಕ್ಕೆ ಸಮಾವೇಶವು ವೇದಿಕೆ ಒದಗಿಸಲಿದೆ. ರಾಜ್ಯದ ಹೂಡಿಕೆ ಆಕರ್ಷಣೆ ಹಾಗೂ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿ ರಾಜ್ಯವು ಕ್ರಮಿಸಬೇಕಾದ ಅಭಿವೃದ್ಧಿ ಪಥದ ದಿಕ್ಸೂಚಿ ಆಗಿರಲಿದೆʼ ಎಂದು ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ವಾಹನ ತಯಾರಿಕೆ, ವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಡಿಸೈನ್‌ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌, ಭಾರಿ ಯಂತ್ರೋಪಕರಣ, ಜೈವಿಕ ತಂತ್ರಜ್ಞಾನ, ಕೃಷಿ ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿನ ರಾಜ್ಯದ ಸಾಧನೆಯನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮ ದಿಗ್ಗಜರು ಈ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

ರಾಜ್ಯದ ಬಂಡವಾಳ ಹೂಡಿಕೆಯ ಆಕರ್ಷಣೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ವಲಯವಾರು ನೀಲನಕ್ಷೆ ರೂಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಪ್ರಮುಖ 6 ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು ಮತ್ತು ತಯಾರಿಕಾ ಚಟುವಟಿಕೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉದ್ಯಮ ದಿಗ್ಗಜರು ಸರ್ಕಾರಕ್ಕೆ ನೀಲನಕ್ಷೆ ಸಿದ್ಧಪಡಿಸಿ ಕೊಡಲಿದ್ದಾರೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";