ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಯಾಗಿಸಲು  ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು: ಇ-ಸ್ವತ್ತು ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯೇತರ ಭೂಮಿಗೆ ಸಂಬಂಧಿಸಿದಂತೆ ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ದಾಖಲೆಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ, ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆಗಳನ್ನು ತರಲು ಕ್ರಮ ಕೈಗೊಳ್ಳುವಂತೆ ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ ಸೂಚಿಸಿದರು.

ಅವರು ಇಂದು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. 2013ರಿಂದ ಇ-ಸ್ವತ್ತು ಸೌಲಭ್ಯವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆಯಾದರೂ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಗ್ರಾಮೀಣ  ಜನರಿಗೆ ಆಗುತ್ತಿರುವ ತೊಡಕುಗಳ ನಿವಾರಣೆಯಾಗಬೇಕಾಗಿದೆ ಎಂದು ಸಚಿವರು ಹೇಳಿದರು.

 ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಿ, ಡಿಜಿಟಲ್‌ ಗ್ರಂಥಾಲಯಗಳಾಗಿ ಮಾರ್ಪಡಿಸುವ ಕೆಲಸ ಭರದಿಂದ ಸಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ 5819 ಪಂಚಾಯತಿ ಗ್ರಂಥಾಲಯಗಳ ಪೈಕಿ ಈಗಾಗಲೆ 5043 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ ಈ ಸಂರ್ಭದಲ್ಲಿ ಹೇಳಿದರು.

ರಾಜ್ಯದ ಗ್ರಾಮೀಣ ಶಾಲೆಗಳಲ್ಲಿ 6085370 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ 4019962 ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿಡದ್ದಾರೆ ಎಂದು ಹೇಳಿದ ಸಚಿವರು ರಾಜ್ಯದಲ್ಲಿ ದಿವ್ಯಾಂಗ ಚೇತನರಿಗಾಗಿ 735 ಬೀಕನ್‌ ಗ್ರಂಥಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೆ  505 ಬೀಕನ್‌ ಗ್ರಂಥಾಲಯಗಳು ಪೂರ್ಣಗೊಂಡಿವೆ ಎಂದು ಸಚಿವರು ಪ್ರಕಟಿಸಿದರು. 

ಮಕ್ಕಳಿಗೆ ಹೆಚ್ಚು ಜ್ಞಾನ ನೀಡುವ ಅರಿವು ಕೇಂದ್ರಗಳನ್ನಾಗಿ ಈ ಗ್ರಂಥಾಲಯಗಳನ್ನು ಸಜ್ಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಗ್ರಂಥಾಲಯಗಳಲ್ಲಿ ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತಹ ಪುಸ್ತಕಗಳನ್ನು ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ದೊರೆಯುವ ಸೇವಾ ಸೌಲಭ್ಯಗಳ ಬಗ್ಗೆ ವಿವರಗಳನ್ನು ನೀಡುವ ಹಾಗೂ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ
ಪರಿಹಾರ ಕೊಡುವ ಸಲುವಾಗಿ ಜಾರಿಗೆ ತರಲಾಗುತ್ತಿರುವ
ʼಪಂಚತಂತ್ರʼ ಆಪ್‌ ಕಾರ್ಯವಿಧಾನದ ಬಗ್ಗೆ ಚರ್ಚಿಸಿದ ಸಚಿವರು ಕೆಲವು ಸುಧಾರಣೆಗಳನ್ನು ಸೂಚಿಸಿದರು.

ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌, ಪಂಚಾಯತ್‌ ರಾಜ್‌ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಇ-ಗೌರ್ನೆನ್ಸ್‌ ನಿರ್ದೇಶಕರಾದ ಶುಭಾ ಕಲ್ಯಾಣ್‌  ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top