ಕಾರ್ಯಕರ್ತರ ಧ್ವನಿಯಾಗಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ: ಪ್ರೀತಂ ಗೌಡ

Kannada Nadu
ಕಾರ್ಯಕರ್ತರ ಧ್ವನಿಯಾಗಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ: ಪ್ರೀತಂ ಗೌಡ

ಬೆಂಗಳೂರು: ಇಂದಿನ ಸಭೆಯಲ್ಲಿ ಕಾರ್ಯಕರ್ತರ ಪರವಾಗಿ, ಕಾರ್ಯಕರ್ತರ ಧ್ವನಿಯಾಗಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯ ಕೇಂದ್ರದ ನಾಯಕರು ಮತ್ತು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ತಿಳಿಸಿದರು.

ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ‘ಸಂಘಟನಾ ಪರ್ವ’ದ ಸಭೆಯ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್ ಅವರ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ‘ಸಂಘಟನಾ ಪರ್ವ’ದ ವಿಚಾರವಾಗಿ ಸಭೆ ನಡೆದಿದೆ. ಬಹುತೇಕ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಒಳಗೊಂಡಂತೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಎಲ್ಲರ ಅಭಿಪ್ರಾಯ ಮತ್ತು ವಸ್ತುಸ್ಥಿತಿಯನ್ನು ಪಡೆಯಲಾಗಿದೆ ಎಂದು ವಿವರಿಸಿದರು.

ಈಚಿನ ದಿನಗಳಲ್ಲಿ ಕೆಲವರು ಮಾತನಾಡುತ್ತಿರುವುದರಿಂದ ಪಕ್ಷದ ಇಮೇಜ್‍ಗೆ ಧಕ್ಕೆ ಆಗುತ್ತಿದೆ; ಕಾರ್ಯಕರ್ತರ ಮನಸ್ಸಿಗೂ ನೋವು ಉಂಟಾಗುತ್ತಿದೆ. ಹಾಗಾಗಿ ಇದಕ್ಕೆ ತಾರ್ಕಿಕ ಅಂತ್ಯ ಆಗಬೇಕು ಎಂಬ ಆಶಯ ವ್ಯಕ್ತವಾಗಿದೆ. ಸುಮಾರು 50 ಶಾಸಕರು ಬಂದಿದ್ದು, ಹಾದಿಬೀದಿಯಲ್ಲಿ ಮಾತನಾಡುವವರಿಗೆ ರಾಷ್ಟ್ರೀಯ ನಾಯಕರು ತಾಕೀತು ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.ಪರಿಸ್ಥಿತಿ ತಿಳಿಯಾಗಿ ಅವರು ಕೂಡ, ಪಕ್ಷದ ಸಂಘಟನೆಯ ಜೊತೆ ನಿಂತು ಪಕ್ಷವನ್ನು ಬಲವರ್ಧನೆ ಮಾಡುವುದಲ್ಲದೆ, ರಾಜ್ಯಾಧ್ಯಕ್ಷರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಎಲ್ಲರೂ ಕೂಡ ಒಟ್ಟಾಗಿ ಕೆಲಸ ಮಾಡಬೇಕೆಂಬುದು ಎಲ್ಲ ಜನಪ್ರತಿನಿಧಿಗಳ ಆಶಯವಾಗಿತ್ತು. ಸಂಘಟನಾ ಪರ್ವದಲ್ಲಿ ನಡೆಯುತ್ತಿರುವ ಸದಸ್ಯತ್ವ ಅಭಿಯಾನ, ಮಂಡಲ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರ ನಿಯುಕ್ತಿಗೆ ಆಗುತ್ತಿರುವ ಎಲ್ಲ ಕ್ರಮಗಳು ಅಚ್ಚುಕಟ್ಟಾಗಿ ಆಗುತ್ತಿದೆ ಎಂದು ಹೇಳಿದರು.

2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತವಾಗಿ ಕೆಲಸ ಆಗಬೇಕೆಂಬ ಅಭಿಪ್ರಾಯವನ್ನು ರಾಧಾಮೋಹನ್ ದಾಸ್ ಅಗರವಾಲ್ ಅವರಿಗೆ ತಿಳಿಸಲಾಗಿದೆ. ಈ ಮೂಲಕ ಪಕ್ಷದಲ್ಲಿ ಗೊಂದಲ ಮಾಡುವ ಪ್ರಯತ್ನಕ್ಕೆ ತೆರೆ ಎಳೆಯುವ ವಿಶ್ವಾಸವನ್ನು ಎಲ್ಲ ಶಾಸಕರು ವ್ಯಕ್ತಪಡಿಸಿದ್ದಾರೆ. ಶಾಸಕರು ಆಗ್ರಹಪೂರ್ವಕವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಇದರಲ್ಲಿ ಯಶಸ್ಸನ್ನು ಕಂಡು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಪಕ್ಷದ ಸಂಘಟನೆ ಆಗಲಿದೆ ಎಂದು ತಿಳಿಸಿದರು. ಶಾಸಕರ ಅಭಿಪ್ರಾಯವನ್ನು ರಾಜ್ಯದ ನಾಯಕರು ಮತ್ತು ಪಕ್ಷದ ಹಿರಿಯರು ಗಮನಿಸುವರೆಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಜನರು ಸರ್ಟಿಫಿಕೇಟ್ ಕೊಡಬೇಕು. ವೈಯಕ್ತಿಕವಾಗಿ ಯಾರಾದರೂ ಅವರ ಭಾವನೆ ವ್ಯಕ್ತಪಡಿಸಲು ಸ್ವತಂತ್ರರು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಮ್ಮ ಪಕ್ಷವು ಸಂಘಟನೆ, ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಕೊಡುತ್ತದೆ. ಅದು ಯಾವಾಗ ಅತಿರೇಕಕ್ಕೆ ಹೋಗುತ್ತದೋ ಆಗ ಅಂತ್ಯವನ್ನು ಹಾಡುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";