ಏಳು ತಿಂಗಳು ಮುನ್ನವೇ ಸಿದ್ಧತೆ ಆರಂಭ; ಸಿಎಂ ಸಮ್ಮುಖದಲ್ಲಿ ಸಿಇಒಗಳ ಜೊತೆ ಸಭೆ

ಬೆಂಗಳೂರು: ದೇಶದ ಹಾಗೂ ಏಷ್ಯಾದ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮವಾದ `ಬೆಂಗಳೂರು ತಂತ್ರಜ್ಞಾನ ಶೃಂಗ’ದ 25ನೇ ಆವೃತ್ತಿಯನ್ನು ನವೆಂಬರ್ 16, 17 ಮತ್ತು 18ರಂದು ವಿಶೇಷವಾದ ರೀತಿಯಲ್ಲಿ ನಡೆಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಈ ಸಂಬಂಧ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ವಿವಿಧ ಕಂಪನಿಗಳ ಸಿಇಓಗಳು ಮತ್ತು ಇತರ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಸೋಮವಾರ 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭೌತಿಕ ರೂಪದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ (ಬಿಟಿಎಸ್) ಈಗಾಗಲೇ ತಯಾರಿ ಆರಂಭವಾಗಿದೆ. ಇದಕ್ಕೆ ಪೂರಕವಾಗಿ ಅಮೆರಿಕ, ಇಂಗ್ಲೆಂಡ್, ಜಪಾನ್ ಮುಂತಾದೆಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರರು. ಬೆಳವಣಿಗೆ ತಂತ್ರಜ್ಞಾನ ಕ್ಷೇತ್ರವು ಅಗಾಧ ನೆರವು ನೀಡುತ್ತಿದೆ. ಪ್ರಧಾನಿ ಮೋದಿ ಅವರು ಘೋಷಿಸಿರುವ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಗೆ ಕರ್ನಾಟಕವು 1.5 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಅವರು ನುಡಿದರು.

ರಾಜ್ಯದ ಐಟಿ ಉದ್ಯಮದಲ್ಲಿ ಸದ್ಯಕ್ಕೆ 25 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ವಲಯಕ್ಕೆ 55 ಲಕ್ಷ ನುರಿತ ಮಂದಿಯ ಅಗತ್ಯವಿದೆ. ಇದನ್ನು ಪರಿಗಣಿಸಿ, ತಕ್ಕ ಯೋಜನೆಗಳನ್ನು ರೂಪಿಸಲಾಗುವುದು. ಜತೆಗೆ ಐ.ಟಿ. ಕ್ಷೇತ್ರದ ವಹಿವಾಟನ್ನು ಈ ಅವಧಿಯಲ್ಲಿ 300 ಬಿಲಿಯನ್ ಡಾಲರ್ ಮಟ್ಟಕ್ಕೆ ಬೆಳೆಸಲಾಗುವುದು ಎಂದು ಅವರು ‌ವಿವರಿಸಿದರು. ಹೋದ ಹಣಕಾಸು ವರ್ಷದಲ್ಲಿ ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶೀ ಹೂಡಿಕೆಯಲ್ಲಿ ಶೇ 40ರಷ್ಟು ಪಾಲು ರಾಜ್ಯದಲ್ಲೇ ಹೂಡಿಕೆಯಾಗಿದ್ದು, ಇದರ ಮೊತ್ತವು 17.3 ಶತಕೋಟಿ ಡಾಲರುಗಳಷ್ಟಾಗಿದೆ. ಜತೆಗೆ, ರಾಜ್ಯವು ರಫ್ತು ವಹಿವಾಟಿನಲ್ಲೂ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, 2021-22ರ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ 91.4 ಶತಕೋಟಿ ಡಾಲರ್ ಮೊತ್ತದ ಸರಕು ಮತ್ತು ಸೇವೆಗಳನ್ನು ವಿದೇಶಗಳಿಗೆ ಪೂರೈಸಿದೆ ಎಂದು ಅವರು ಹೇಳಿದರು. ಇತ್ತೀಚೆಗೆ `ಕರ್ನಾಟಕ ಡೇಟಾ ಸೆಂಟರ್ ನೀತಿ-2022’ನ್ನು ಕೂಡ ಜಾರಿಗೆ ತರಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂ. ಬಂಡವಾಳವನ್ನು ಸೆಳೆಯಲಾಗುವುದು ಎಂದು ಸಚಿವರು ವಿವರಿಸಿದರು. ವೆಬ್3 ಮತ್ತು ಮೆಟಾವರ್ಸ್ ಗೆ ಸಂಬಂಧಿಸಿದಂತೆ ಸಹ ಸಮರ್ಪಕ ನೀತಿ ಜಾರಿಗೆ ತರಲಾಗುವುದು. ಅಂತಿಮವಾಗಿ, ತಂತ್ರಜ್ಞಾನದ ಲಾಭವು ಗ್ರಾಮೀಣ ಪ್ರದೇಶದ ಜನರನ್ನು ತಲುಪಬೇಕು ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.

ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಮೈಸೂರಿನಲ್ಲಿ ಸೈಬರ್ ಸೆಕ್ಯುರಿಟಿಗೆ, ಹುಬ್ಬಳ್ಳಿಯಲ್ಲಿ ಇಎಸ್ ಡಿಎಂ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಉದ್ದಿಮೆಗಳಿಗೆ, ಮಂಗಳೂರಿನಲ್ಲಿ ಫಿನ್-ಟೆಕ್ ವಲಯಕ್ಕೆ ಮತ್ತು ಬೆಳಗಾವಿಯಲ್ಲಿ ಏರೋಸ್ಪೇಸ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಇವೆಲ್ಲವೂ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು. ಸಿಇಒಗಳ ಜೊತೆ ಬೆಳಿಗ್ಗೆ ನಡೆಸಿದ ಸಭೆಯಲ್ಲಿ, ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಜಾರಿಗೆ ತಂದಿರುವ ಕಡ್ಡಾಯ 30 ವಾರಗಳ ಇಂಟರ್ನ್ ಷಿಪ್ ಅನ್ನು ಕಾರ್ಯಾನುಷ್ಠಾನಕ್ಕೆ ತರಲು ಉದ್ದಿಮೆಗಳ ಪೂರ್ಣ ಸಹಕಾರ ಕೋರಲಾಗಿದೆ ಎಂದು ಸಚಿವರು ತಿಳಿಸಿದರು. ರಾಜ್ಯ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ವಿದ್ಯುನ್ಮಾನ ಹಾಗೂ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಸಿ.ಎನ್.ಮೀನಾ ನಾಗರಾಜ್, ಜೈವಿಕ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ(ಏಬಲ್)ದ ಅಧ್ಯಕ್ಷ ಜಿ.ಎಸ್. ಕೃಷ್ಣನ್, ಭಾರತೀಯ ಸಾಫ್ಟ್ವೇರ್ ಪಾರ್ಕ್ ಗಳ ಅಧ್ಯಕ್ಷ ಶೈಲೇಂದ್ರಕುಮಾರ್ ತ್ಯಾಗಿ, ಜಗದೀಶ್ ಪಟಣ್ಕರ್ ಉಪಸ್ಥಿತರಿದ್ದರು. ಬಿ.ಟಿ. ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ವರ್ಚುವಲ್ ನಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top