ಶಾಸಕ ಭರತ್ ರೆಡ್ಡಿ ಜನ್ಮ ದಿನಾಚರಣೆ ಆಯೋಜನೆ
ಬಳ್ಳಾರಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮ ದಿನವನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಎರಡನೇ ಪೂರ್ವಭಾವಿ ಸಭೆ ನಡೆಸಲಾಯಿತು.
ಬಳ್ಳಾರಿ ಮಹಾನಗರ ಪಾಲಿಕೆಯ ಹಾಲಿ ಸದಸ್ಯರು, ಮಾಜಿ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗದ ಆಯ್ದ ಸದಸ್ಯರು ಭಾಗಿಯಾಗಿ ಸಲಹೆ ಸೂಚನೆ ನೀಡಿದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ವಿಷ್ಣು ಬೋಯಾಪಾಟಿ ಸಭೆಯಲ್ಲಿ ಹಾಜರಿದ್ದು, ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು. ಇದೇ ಅ.25ರಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮ ದಿನಾಚರಣೆಯನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಿದ್ದು, ನಗರದ ಮೂರು ಕಡೆಗಳಲ್ಲಿ ಭೋಜನಕೂಟವನ್ನು ಏರ್ಪಡಿಸಲು ತಯಾರಿ ನಡೆಸಲಾಗಿದೆ. ಅ.25ರಂದು ನಗರದ ಶ್ರೀರಾಂಪುರ ಕಾಲೋನಿಯ ಸರ್ಕಾರಿ ಶಾಲೆಯ ಬಳಿ ಹಾಗೂ ಎಪಿಎಂಸಿಯ ಗಣೇಶ ಗುಡಿಯ ಬಳಿ ಬೆಳಿಗ್ಗೆ 11 ಗಂಟೆಗೆ ಭೋಜನಕೂಟವನ್ನು ಏರ್ಪಡಿಸಲಾಗಿದೆ. ಅದೇ ರೀತಿ ನಗರದ ತಾಳೂರು ರಸ್ತೆಯ ನಾಗಪ್ಪನ ಕಟ್ಟೆಯ ಬಳಿ ಸಂಜೆ 5 ಗಂಟೆಯ ಬಳಿಕ ಭೋಜನಕೂಟವನ್ನು ಏರ್ಪಡಿಸಲಾಗಿದ್ದು ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‍ಗಳಿಂದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪಾಲಿಕೆ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಮುಖಂಡರು ಶ್ರಮಿಸಬೇಕೆಂದು ಮನವಿ ಮಾಡಿದರು.
ಪಾಲಿಕೆ ಸದಸ್ಯ ಪೇರಂ ವಿವೇಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಪರ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮ ದಿನಾಚರಣೆಯ ದಿನ ಅಂದಾಜು 35 ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದರು.
ಶಾಸಕ ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗದ ಪ್ರಮುಖ ಸದಸ್ಯ ಸತೀಶ್ ರೆಡ್ಡಿ ಮಾತನಾಡಿ, ನಗರದ ಮೂರು ಕಡೆಗಳಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಿಗೆ ತೆರಳಲು ಖಾಸಗಿ ವಾಹನ ಹಾಗೂ ಸರ್ಕಾರಿ ಬಸ್‍ಗಳನ್ನು ಬಾಡಿಗೆ ಪಡೆದು ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು, ಈ ಬಗ್ಗೆ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ಅವರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು.
ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್, ನೂರ್ ಅಹ್ಮದ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಬ್ರೂಸ್‍ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುಸೇನ್ ಪೀರಾ, ಮುಖಂಡರಾದ ಅಯಾಜ್ ಅಹ್ಮದ್, ಪಿ.ಜಗನ್, ಬಿಆರ್‍ಎಲ್ ಸೀನಾ ಸೇರಿದಂತೆ ಹಲವು ಜನ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಿಂಚು ಶ್ರೀನಿವಾಸ್, ಸುಬ್ಬರಾಯುಡು, ನಾಜು, ಜಬ್ಬಾರ್, ಡಿ.ಸೂರಿ, ರಾಮಾಂಜನೇಯಲು, ಕುಬೇರಾ, ಶಿವರಾಜ್, ರಾಜಶೇಖರ್, ಉಮಾಪತಿ, ನಾರಾ ವಿನಯ್ ರೆಡ್ಡಿ, ಬೆಣಕಲ್ ಬಸವರಾಜ್, ಸಿದ್ಧೇಶ್, ವೀರೇಂದ್ರಕುಮಾರ್, ಬೆಣಕಲ್ ರಘು, ಶ್ರೀಧರ್, ನಾರಾಯಣ ರೆಡ್ಡಿ, ಅರ್ಷದ್, ಶಿವು, ಪ್ರದೀಪ್, ಹುಂಡೇಕರ್ ರಾಕೇಶ್, ಮಂಜು ಸೇರಿದಂತೆ ನೂರಾರು ಜನ ಸಭೆಯಲ್ಲಿ ಹಾಜರಿದ್ದರು.