ಪ್ರಜ್ವಲ್ ರೇವಣ್ಣ ಇದೀಗ ಸಜಾ ಬಂಧಿ ಸೆಲ್ ನಲ್ಲಿ: ಪ್ರತಿದಿನ 8 ಗಂಟೆ ಕೆಲಸ ಮಾಡುವುದು ಕಡ್ಡಾಯ
ಬೆಂಗಳೂರು, ಆ. 3- ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ರೇವಣ್ಣನ ಜೀವನಶೈಲಿ ಇನ್ನುಮುಂದೆ ಜೈಲಿನಲ್ಲಿ ಬದಲಾಗಿದ್ದು ಸಜಾಬಂಧಿ ಖೈದಿಯಾಗಿ ಅವರನ್ನು ಪರಿಗಣಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆಜೀವ ಜೈಲು ಶಿಕ್ಷೆಗೆ ಗುರಿಯಾದ ಪ್ರಜ್ವಲ್ರೇವಣ್ಣ ಅವರನ್ನು ನಿನ್ನೆ ನ್ಯಾಯಾಲಯದಿಂದ ನೇರವಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರಿಗೆ ಜೈಲು ಅಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ.
ಪ್ರಜ್ವಲ್ರೇವಣ್ಣ ಅವರ ಖೈದಿ ನಂಬರ್ 15528 ಆಗಿದ್ದು, ಇಂದಿನಿಂದ ಅವರು ಜೈಲಿನಲ್ಲಿ ಸಜಾಬಂಧಿ ಖೈದಿಗಳಿಗೆ ನೀಡುವ ಬಿಳಿ ವಸ್ತ್ರವನ್ನು ಧರಿಸಿ ಜೈಲು ನಿಯಮಾವಳಿ ಅನುಸಾರ ಜೈಲಿನ ಅಧೀಕ್ಷಕರು ನೀಡುವ ಕೆಲಸ ಮಾಡಬೇಕು.
ಜೈಲಿನಲ್ಲಿ ಇದುವರೆಗೂ ಪ್ರತ್ಯೇಕ ಸೆಲ್ ನಲ್ಲಿದ್ದ ಪ್ರಜ್ವಲ್ರೇವಣ್ಣ ಅವರನ್ನು ಇಂದು ಸಜಾಬಂಧಿ ಖೈದಿಗಳ ಬ್ಯಾರಕ್ಗೆ ವರ್ಗಾವಣೆ ಮಾಡಲಾಗಿದೆ. ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ರೇವಣ್ಣ ನಿಯಮಗಳಂತೆ ಜೈಲಿನ ಒಳಗೆ 8 ಗಂಟೆ ಕೆಲಸ ಮಾಡಬೇಕು. ಜತೆಗೆ ಸಜಾಬಂಧಿ ಖೈದಿಗಳ ನಿಯಮವನ್ನು ಪಾಲಿಸಬೇಕು. ಜೈಲಿನ ಒಳಗೆ ಪ್ರಜ್ವಲ್ರೇವಣ್ಣ ಅವರಿಗೆ ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ಕೆಲಸ ಸೇರಿದಂತೆ ಯಾವುದಾದರೊಂದು ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಪ್ರಜ್ವಲ್ರೇವಣ್ಣ ಅವರಿಗೆ ಆಯ್ಕೆಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ನೀಡಲಾಗುತ್ತದೆ. ಮೊದಲು 1 ವರ್ಷ ಕೌಶಲ್ಯರಹಿತ ಎಂದು 524 ರೂ. ಸಂಬಳ ನೀಡಲಾಗುತ್ತೆ. ಆಮೇಲೆ ಅರೆಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ.
ಮೌನದಲ್ಲಿರುವ ಪ್ರಜ್ವಲ್ ನ್ಯಾಯಾಲಯದ ತೀರ್ಪಿನ ನಂತರ ಪ್ರಜ್ವಲ್ರೇವಣ್ಣ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದು, ನಿನ್ನೆ ತಡರಾತ್ರಿಯವರೆಗೂ ನಿದ್ದೆ ಮಾಡದೆ ಕುಳಿತ್ತಿದ್ದರು
ಎನ್ನಲಾಗಿದೆ. ಇಂದು ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿದ ನಂತರವೂ ಪ್ರಜ್ವಲ್ರೇವಣ್ಣ ಒಂದು ರೀತಿ ಮಂಕು ಬಡಿದವರಂತೆ ಕುಳಿತಿದ್ದು, ಅವರಿಗೆ ಬೆಳಗಿನ ಉಪಾಹಾರವಾಗಿ ಅವಲಕ್ಕಿ ಉಪ್ಪಿಟ್ಟನ್ನು ಜೈಲು ಅಧಿಕಾರಿಗಳು ನೀಡಿದ್ದರು ಎನ್ನಲಾಗಿದೆ.