ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು : “ನೈಸ್ ರಸ್ತೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಬೆಂಗಳೂರಿನ ಸೋಂಪುರ ಗ್ರಾಮದ ರೈತರ ನಿಯೋಗವು ಕುಮಾರಕೃಪಾ ಅತಿಥಿ ಗೃಹದಲ್ಲಿ ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿ ಅಹವಾಲು ಸಲ್ಲಿಸಿದಾಗ ಡಿಸಿಎಂ ಈ ಭರವಸೆ ನೀಡಿದರು. “ನೈಸ್ ರಸ್ತೆಗೆ ನಮ್ಮ ಜಮೀನು ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳಾಗಿವೆ. ಭೂಮಿಗೆ ಪರಿಹಾರ ಮೊತ್ತ ಸಿಕ್ಕಿದೆ. ಆದರೆ ನಮಗೆ ನಿವೇಶನ ನೀಡುವ ಭರವಸೆ ಈವರೆಗೂ ಈಡೇರಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಯಾವೊಬ್ಬ ರೈತರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಸೋಂಪುರ ಗ್ರಾಮಕ್ಕೆ ನೀವು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಖುದ್ದು ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು.

ನೈಸ್ ರಸ್ತೆಯಲ್ಲಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ ಗೊತ್ತಿಲ್ಲ. ಅದು ನೈಸ್ ಹಾಗೂ ಸರ್ಕಾರಕ್ಕೆ ಬಿಟ್ಟ ವಿಚಾರ. ಭೂಮಿ ಕಳೆದುಕೊಂಡಿರುವ ರೈತರಿಗೆ ನ್ಯಾಯ ಸಿಗಬೇಕು. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ನಾವು ಮನವಿ ಮಾಡಿದ್ದೆವು. ಆಗ ಸದನ ಸಮಿತಿ ಮಾಡಿ ವರದಿ ಪಡೆದಿದ್ದರು. ನಾವು ನಮ್ಮ ಸಮಸ್ಯೆಗಳನ್ನು ಎಲ್ಲಾ ಸರ್ಕಾರದ ಬಳಿ ಹೇಳಿಕೊಂಡಿದ್ದೇವೆ. ಯಾರಿಂದಲೂ ಪರಿಹಾರ ಸಿಕ್ಕಿಲ್ಲ. ನೀವು ಮುಂದೆ ನಿಂತು ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕು. ನಿಮ್ಮಿಂದ ನ್ಯಾಯ ಸಿಗಲಿದೆ ಎಂಬ ಭರವಸೆ ನಮಗಿದೆ” ಎಂದು ರೈತರ ನಿಯೋಗ ಡಿಸಿಎಂ ಅವರಿಗೆ ಮನವಿ ಮಾಡಿತು. ಇದೇ ವೇಳೆ “2003ರಲ್ಲಿ ಕೆಲವು ಸರ್ವೆಗಳ ಜಮೀನು ಭೂಸ್ವಾಧೀನಕ್ಕೆ ಮಾತ್ರ ಪರಿಹಾರ ನೀಡಲಾಗಿದ್ದು, ಮತ್ತೆ ಕೆಲವು ಸರ್ವೇ ನಂಬರ್ ಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡಿರಲಿಲ್ಲ. ಆದರೆ ಈಗ ಆ ಜಮೀನು ಭೂಸ್ವಾಧೀನಕ್ಕೆ 2003 ರಲ್ಲಿ ನಿಗದಿ ಮಾಡಿದ್ದ ದರದ ಮೊತ್ತಕ್ಕೆ ಬಡ್ಡಿ ಸೇರಿಸಿ ಪರಿಹಾರ ಹಣ ನೀಡಲು ಮುಂದಾಗಿದ್ದಾರೆ” ಎಂದು ನಿಯೋಗದ ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, “ಈ ವಿಚಾರವಾಗಿ ಮೊನ್ನೆಯಷ್ಟೇ ಅಧಿಕಾರಿಗಳ ಜತೆ ಚರ್ಚಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ KIADB ಆಕ್ಟ್ ಹಾಗೂ ಬಿಡಿಎ ಆಕ್ಟ್ ನಲ್ಲಿ ಹಳೆ ದರಕ್ಕೆ ಪರಿಹಾರ ನೀಡಬೇಕು ಎಂದು ಆದೇಶ ನೀಡಲಾಗಿದೆ. ಈ ವಿಚಾರವಾಗಿ ಎರಡು ದಿನಗಳಲ್ಲಿ ಮಾತನಾಡುತ್ತೇನೆ. ನಿಮ್ಮ ಮನವಿ ಪರಿಶೀಲಿಸುತ್ತೇನೆ. ನಿವೇಶನ ವಿಚಾರ ನನ್ನ ಗಮನಕ್ಕೆ ಬಂದಿದೆ.  ನಿವೇಶನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ವಿಚಾರಗಳನ್ನು ಪರಿಶೀಲನೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top