ಬಳ್ಳಾರಿ: ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಗುರುವಾರದಂದು ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿರುವುದು, ತಾನು ಮಾಡಿದ ತಪ್ಪಿಗಾಗಿ ಹಾಕಿದ ಪಶ್ಚಾತ್ತಾಪದ ಕಣ್ಣೀರು. ಅವರ ಕಣ್ಣೀರನ್ನು ಜಿಲ್ಲೆಯ ಜನರು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಬಿಜೆಪಿ ಧುರೀಣ, ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದ್ದಾರೆ.
ಸಂಡೂರು ಪಟ್ಟಣದಲ್ಲಿ ಉಪ ಚುನಾವಣೆ ಪ್ರಯುಕ್ತ ನೂತನ ಮನೆ ಹಾಗೂ ಪ್ರಚಾರ ಕಛೇರಿಗೆ ಪೂಜೆ ನೆರವೇರಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಏನೇ ಹೇಳಿದರೂ, ಕಣ್ಣೀರು ಹಾಕಿದರೂ ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷವು ಅವರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿದೆ ಎಂದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಡಿದ ತಪ್ಪಿಗೆ ಕಣ್ಣೀರು ಹಾಕಿರಬಹುದು. ಯಾರೇ ಆಗಲೀ, ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ರಾಜಕೀಯವಾಗಿ ನಾಗೇಂದ್ರರನ್ನು ಬೆಳೆಸಿದ್ದೇ ನಾವು. ಇಂತಹವರನ್ನು ನಾವು ಬೆಳೆಸಿದ್ದೇವೆಯೇ ಎಂದು ನಾನು ಈಗ ಪಶ್ಚಾತ್ತಾಪ ಪಡುವಂತಾಗಿದೆ. ವಾಲ್ಮೀಕಿ ನಿಗಮದ ಹಗರಣ ಹಾಗೂ ಅದರಲ್ಲಿ ನಾಗೇಂದ್ರ ಪಾತ್ರದ ಬಗೆ `ಇಡಿ’ ಸಲ್ಲಿಸಿರುವ `ಚಾರ್ಜ್‍ಶೀಟ್’ಗಳಲ್ಲಿನ ವಿವರಗಳೆಲ್ಲವನ್ನೂ ಪ್ರತ್ಯೇಕವಾಗಿ ಪುಸ್ತಕದ (ಬುಕ್‍ಲೆಟ್) ರೂಪದಲ್ಲಿ ಮುದ್ರಿಸಿ, ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದರು.
ಎರಡು ದಿನದಲ್ಲಿ ಫೈನಲ್: ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ, ಬಿಜೆಪಿಯಿಂದ 19 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಯಾರಿಗೆ ಎಂಬುದು ಫೈನಲ್ ಆಗಲಿದೆ. ಯಾರಿಗೇ ಟಿಕೆಟ್ ಸಿಕ್ಕರೂ ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ಜನಾರ್ದನರೆಡ್ಡಿ ಸ್ಪಷ್ಟವಾಗಿ ನುಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಓರ್ವ ಬಿಜೆಪಿ ಶಾಸಕರನ್ನು ಗೆಲ್ಲಿಸಿಕೊಡಿ. ಅಭಿವೃದ್ಧಿ ಮಾಡಿ ತೋರಿಸುತ್ತಾರೆ. ಸಂಡೂರು ಕ್ಷೇತ್ರದ ಗೆಲುವಿನಿಂದ ಬಳ್ಳಾರಿ ಜಿಲ್ಲೆಯಲ್ಲಿ `ಬಿಜೆಪಿ’ಯ ವಿಜಯದ ಪರಂಪರೆ ಪ್ರಾರಂಭವಾಗಲಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ನಾಯ್ಡು, ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳಿಕೇರಿ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರ ಹನುಮಂತು, ಮುಖಂಡರಾದ ಜಿ.ಟಿ.ಪಂಪಾಪತಿ, ದಮ್ಮೂರು ಶೇಖರ್, ನಾನಾಸಾಹೇಬ್ನಿಕ್ಕಂ, ರಘು, ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಕೆ.ಎಸ್.ದಿವಾಕರ್, ಮತ್ತಿತರೆ ಪ್ರಮುಖರು ಉಪಸ್ಥಿತರಿದ್ದರು.