ಆ.28ರಿಂದ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌

ಪ್ಯಾರಿಸ್‌: 2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ಆಯೋಜಿಸಲು ಪ್ರಣಯದೂರು ಪ್ಯಾರಿಸ್‌ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರೂ ಚಾಂಪಿಯನ್ನರೇ. ಏಕೆಂದರೆ ಅವರೆಲ್ಲಾ ಈಗಾಗಲೇ ತಮ್ಮ ಜೀವನದ ಹೋರಾಟದಲ್ಲಿ ಗೆದ್ದಾಗಿದೆ. ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಸಿಗುವ ಪದಕ ಅವರ ಸಾಧನೆಯ ಕಿರೀಟದ ಮೇಲೆ ಮತ್ತೊಂದು ಗರಿ.

3 ವರ್ಷಗಳ ಹಿಂದೆ ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಪ್ಯಾರಿಸ್‌ ತಲುಪಿದೆ. 

22 ಕ್ರೀಡೆಗಳು, 549 ಸ್ಪರ್ಧೆಗಳು:

ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಮೊದಲ ಬಾರಿಗೆ ಆಯೋಜನೆ:

ಪ್ಯಾರಿಸ್‌ ನಗರ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್ ಇದು. 1992ರಲ್ಲಿ ಟಿಗ್ನೆಸ್‌ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು.

ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್‌ ಆಯೋಜಿಸುವ ನಗರವೇ ಪ್ಯಾರಾಲಿಂಪಿಕ್ಸ್‌ಗೂ ಆತಿಥ್ಯ ವಹಿಸಬೇಕು. ಹೀಗಾಗಿ, ಪ್ಯಾರಿಸ್‌ ನಗರಕ್ಕೆ ಒಲಿಂಪಿಕ್ಸ್‌ ಆತಿಥ್ಯ ಹಕ್ಕು ಸಿಕ್ಕಾಗಲೇ ಪ್ಯಾರಾಲಿಂಪಿಕ್ಸ್‌ನ ಆತಿಥ್ಯ ಹಕ್ಕು ಸಹ ದೊರೆತಿತ್ತು. 

ಭಾರತದಿಂದ ದಾಖಲೆಯ 84 ಕ್ರೀಡಾಪಟುಗಳು:

ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದು ಭಾರತದ ಮಟ್ಟಿಗೆ ದಾಖಲೆ ಎನಿಸಿದೆ. 2020ರ ಟೋಕಿಯೋ ಪ್ಯಾರಾಗೇಮ್ಸ್‌ಗೆ 54 ಅಥ್ಲೀಟ್‌ಗಳು ತೆರಳಿ, 19 ಪದಕಗಳನ್ನು ಜಯಿಸಿದ್ದರು. 1968ರಲ್ಲೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ, 1984ರಿಂದ ನಡೆದ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.

ಅಥ್ಲೆಟಿಕ್ಸ್‌ನಲ್ಲೇ ಭಾರತದ ಅತಿಹೆಚ್ಚು ಸ್ಪರ್ಧಿಗಳು ಕಣಕ್ಕೆ:

ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲೇ ಭಾರತದ 38 ಸ್ಪರ್ಧಿಗಳು ಇರಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಜುಡೋ, ಪ್ಯಾರಾಕೆನೋಯಿಂಗ್‌, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಭಾರತಕ್ಕೆ 25 ಪದಕ ಗುರಿ:

ಕಳೆದ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸುಮಿತ್‌ ಅಂತಿಲ್‌, ಮರಿಯಪ್ಪನ್‌ ತಂಗವೇಲು, ಸುಹಾನ್‌ ಎಲ್‌.ವೈ, ಕೃಷ್ಣ ನಾಗರ್‌, ಅವನಿ ಲೇಖರ, ಮನೀಶ್‌ ನರ್ವಾಲ್‌, ಭವಿನಾ ಪಟೇಲ್‌, ನಿಶಾದ್‌ ಕುಮಾರ್‌ ಸೇರಿ ಇನ್ನೂ ಕೆಲವರು ಈ ಆವೃತ್ತಿಗೂ ಅರ್ಹತೆ ಪಡೆದಿದ್ದು, ಮತ್ತೊಮ್ಮೆ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

ಇನ್ನು ಯುವ ಪ್ಯಾರಾ ಆರ್ಚರಿ ಪಟು, ಎರಡೂ ಕೈಗಳಿಲ್ಲದಿದ್ದರೂ ವಿಶ್ವ ಱಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಶೀತಲ್‌ ದೇವಿ ಭಾರತದ ಅತಿದೊಡ್ಡ ಪದಕ ಭರವಸೆ ಎನಿಸಿದ್ದಾರೆ.

 ಪ್ಯಾರಾಲಿಂಪಿಕ್ಸ್‌ನಲ್ಲಿ ಈ ವರೆಗೂ ಭಾರತ ಒಟ್ಟು 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ ಒಟ್ಟು 31 ಪದಕಗಳನ್ನು ಗೆದ್ದಿದ್ದು, ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಮೂಲಕ, ಅರ್ಧಶತಕದ ಗಡಿ ದಾಟುವ ಉತ್ಸಾಹದಲ್ಲಿದೆ.

ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯಿಂದ ಪ್ರೋತ್ಸಾಹ:

ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಕಳೆದ 3-4 ವರ್ಷದಲ್ಲಿ ಭಾರತೀಯ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅಗತ್ಯ ನೆರವು ಒದಗಿಸಿದ್ದು, ಪದಕ ಗೆಲ್ಲಲು ಬೇಕಿರುವ ಸಿದ್ಧತೆ ಮಾಡಿಕೊಳ್ಳಲು ಎಲ್ಲಾ ವ್ಯವಸ್ಥೆ ಕಲ್ಪಿಸಿದೆ. ಪಿಸಿಐನ ಪ್ರಧಾನ ಕೋಚ್‌ ಆಗಿರುವ ಕರ್ನಾಟಕದ ಸತ್ಯನಾರಾಯಣ, ಈ ಬಾರಿ ಭಾರತ ಕನಿಷ್ಠ 25-30 ಪದಕಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

‘ಇದೇ ಮೊದಲ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಕ್ರೀಡಾಪಟುಗಳನ್ನು 12 ಕ್ರೀಡೆಗಳಲ್ಲಿ ಕಣಕ್ಕಿಳಿಸುತ್ತಿದೆ. ಈ ಬಾರಿ ಕನಿಷ್ಠ 25ರಿಂದ 30 ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸುತ್ತಿದೆ. ಒಲಿಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌ ಅಥ್ಲೀಟ್‌ಗಳಿಗೆ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಈ ಬಾರಿ ನಮ್ಮಿಂದ ಹಲವು ದಾಖಲೆಗಳು ನಿರ್ಮಾಣಗೊಳ್ಳಲಿದೆ ಎನ್ನುವ ನಂಬಿಕೆ ಇದೆ’ ಎಂದು ಸತ್ಯನಾರಾಯಣ ಹೇಳಿಕೊಂಡಿದ್ದಾರೆ.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top