ಬೆಂಗಳೂರು: ಚಾಂಪಿಯನ್ಸ್ ಟ್ರೋಫಿ 2025ರ ಲೀಗ್ ಹಂತದ ಪಂದ್ಯಗಳಿಗೆ ಮಾ.2ಕ್ಕೆ ತೆರೆ ಬೀಳಲಿದೆ. ಈ ಪಂದ್ಯಕ್ಕೂ ಮುನ್ನವೇ ಆತಿಥೇಯ ಪಾಕಿಸ್ತಾನ್ ಹಾಗೂ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಅಂತ್ಯಗೊಳಿಸಿದೆ. ಅದು ಸಹ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ನಿರ್ಮಿಸುವ ಮೂಲಕ ಎಂಬುದು ವಿಶೇಷ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆತಿಥೇಯ ದೇಶವೊಂದು ಒಂದೇ ಒಂದು ಪಂದ್ಯ ಗೆಲ್ಲದೆ ಟೂರ್ನಿಯನ್ನು ಅಂತ್ಯಗೊಳಿಸಿದೆ. ಈ ಬಾರಿಯ ಟೂರ್ನಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ್ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತರೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿದೆ. ಇನ್ನು ಬಾಂಗ್ಲಾದೇಶ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಆತಿಥೇಯ ತಂಡವೊಂದು ಗೆಲುವು ದಾಖಲಿಸದೇ ಟೂರ್ನಿ ಅಂತ್ಯಗೊಳಿಸಿದ ಅತ್ಯಂತ ಕೆಟ್ಟ ದಾಖಲೆ ಪಾಕಿಸ್ತಾನ್ ಪಾಲಾಗಿದೆ.
ಮತ್ತೊಂದೆಡೆ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವು ಈ ಬಾರಿ ಗೆಲುವಿನ ಖಾತೆ ತೆರೆಯದೇ ಟೂರ್ನಿ ಅಂತ್ಯಗೊಳಿಸಿರುವುದು ವಿಶೇಷ. ಅಂದರೆ ಆಂಗ್ಲ ಪಡೆ ಆಡಿದ ಮೂರು ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ. ಮೊದಲ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಇಂಗ್ಲೆಂಡ್, ದ್ವಿತೀಯ ಮ್ಯಾಚ್ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಪರಾಜಯಗೊಂಡಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೌತ್ ಆಫ್ರಿಕಾ ಬಗ್ಗು ಬಡಿದಿದೆ. ಈ ಮೂಲಕ ಇಂಗ್ಲೆಂಡ್ ತಂಡವು ಇದೇ ಮೊದಲ ಬಾರಿಗೆ ಒಂದೇ ಗೆಲುವು ಕಾಣದೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಅಂತ್ಯಗೊಳಿಸಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ಒಂದೇ ಒಂದು ಗೆಲುವು ಕಾಣದೇ ಟೂರ್ನಿ ಯನ್ನು ಅಂತ್ಯಗೊಳಿಸಿದ್ದು ಮಾತ್ರ ವಿಪರ್ಯಾಸ ಎನ್ನಬಹುದು.