ಪಾಕಿಸ್ತಾನಕ್ಕೆ ಹಸ್ತಲಾಘವ ಇಲ್ಲ: ಭಾರತದ ವಿಭಿನ್ನ ಪ್ರತಿಭಟನೆ!

Kannada Nadu
ಪಾಕಿಸ್ತಾನಕ್ಕೆ ಹಸ್ತಲಾಘವ ಇಲ್ಲ: ಭಾರತದ ವಿಭಿನ್ನ ಪ್ರತಿಭಟನೆ!

ದುಬೈ: 2025 ರ ಏಷ್ಯಾ ಕಪ್‌ನಲ್ಲಿ ಸೆ. 14 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಬಹಳ ಸುಲಭವಾಗಿ ಗೆದ್ದುಕೊಂಡಿತು. ಪಂದ್ಯ ಮುಗಿದ ನಂತರ, ಭಾರತ ತಂಡವು ಯಾವುದೇ ಆಟಗಾರರು ಪಾಕಿಸ್ತಾನಿ ಆಟಗಾರನೊಂದಿಗೆ ಹಸ್ತಲಾಘವ ಮಾಡಲಿಲ್ಲ ಮತ್ತು ಪಾಕಿಸ್ತಾನ ತಂಡ ಇದಕ್ಕಾಗಿ ಕಾಯುತ್ತ ನಿಂತರೂ ಯಾವುದೇ ಟೀಮ್ ಇಂಡಿಯಾ ಪ್ಲೇಯರ್ಸ್ ಬರಲಿಲ್ಲ. ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ, ಅವರು ತಮ್ಮ ಸಹ ಆಟಗಾರ ಶಿವಂ ದುಬೆ ಅವರೊಂದಿಗೆ ಮೈದಾನದಿಂದ ಹೊರನಡೆದರು.
ಭಾರತ ತಂಡ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸುವುದು ಎಂದು ಮೊದಲೇ ಸುದ್ದಿಯಾಗಿತ್ತು. ಈಗ ಅದು ನಿಜವಾಗಿದೆ. ಪಂದ್ಯ ಮುಗಿದ ಮೇಲೆ ಮಾತ್ರ ಅಲ್ಲ. ಪಂದ್ಯಕ್ಕೂ ಮುನ್ನ ಟಾಸ್ ಸಂದರ್ಭದಲ್ಲಿ ಕೂಡಾ ಹಸ್ತ ಲಾಘವ ಮಾಡದೇ ಭಾರತ ತನ್ನ ಪ್ರತಿಭಟನೆ ತೋರಿದೆ. ಯಾವುದೇ ತಂಡದ ನಾಯಕರು ಟಾಸ್ ವೇಳೆ ಪರಸ್ಪರ ಹಸ್ತಲಾಘವ ಮಾಡುವುದು ರೂಢಿ. ಆದರೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರ ಮುಖಾಮುಖಿ ಕೇವಲ ಟಾಸ್ ಗಷ್ಟೇ ಸೀಮಿತವಾಯ್ತು. ಪರಸ್ಪರ ಕೈಕುಲುಕಿ ಶುಭಾಶಯ ವಿನಿಮಯ ಮಾಡಲಿಲ್ಲ, ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ ಅಥವಾ ಅಪ್ಪಿಕೊಳ್ಳಲೂ ಇಲ್ಲ. ಈ ಹಿಂದೆ ಎಂದೂ ಕಾಣದ ದೃಶ್ಯಗಳನ್ನು ಕ್ರಿಕೆಟ್ ಪ್ರೇಮಿಗಳು ನೋಡಿದರು.

ಪಾಕಿಸ್ತಾನಿಗಳಿಗೆ ತಕ್ಕ ಉತ್ತರ
ಟೀಮ್ ಇಂಡಿಯಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಈ ನಿರ್ಧಾರದ ನಂತರ, ಒಂದೆಡೆ ಭಾರತೀಯ ಅಭಿಮಾನಿಗಳು ಸಂಪೂರ್ಣವಾಗಿ ಸಂತೋಷಗೊAಡಿದ್ದಾರೆ. ಅದೇ ಸಮಯದಲ್ಲಿ, ಈ ವಿಷಯದ ಬಗ್ಗೆ ಪಾಕಿಸ್ತಾನದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ನಿನ್ನೆ ರಾತ್ರಿಯಿಂದ, ಪಾಕಿಸ್ತಾನಿ ಮಾಧ್ಯಮವಾಗಲಿ ಅಥವಾ ಮಾಜಿ ಪಾಕಿಸ್ತಾನಿ ಆಟಗಾರರಾಗಲಿ, ಭಾರತೀಯ ತಂಡವು ತಮ್ಮೊಂದಿಗೆ ಕೈಕುಲುಕಲಿಲ್ಲ ಎಂದು ಅವರು ಟೀಕಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಕ್ರೀಡಾ ಮನೋಭಾವವನ್ನು ಅವಮಾನಿಸಿದೆ ಎಂದು ಸಹ ಪಾಕಿಸ್ತಾನಿಗಳು ಉಲ್ಲೇಖಿಸುತ್ತಿದ್ದಾರೆ, ಆದರೆ ಸೂರ್ಯ ಅಂತಹ ಜನರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರ ಪಾಕಿಸ್ತಾನಿಗಳನ್ನು ಮೌನಗೊಳಿಸಿದೆ.
ಪಂದ್ಯ ಮುಗಿದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಬೇಸರದಲ್ಲಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ಗೂ ಬಂದಿರಲಿಲ್ಲ. ಆದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರವೂ ಪಾಕಿಸ್ತಾನಿಗಳಿಗೆ ಬುದ್ದಿ ಕಲಿಸಲು ಹಿಂಜರಿಯಲಿಲ್ಲ. ಪಂದ್ಯದ ನಂತರ ಸೂರ್ಯ ಪತ್ರಿಕಾಗೋಷ್ಠಿಗೆ ಬಂದಾಗ, ಪತ್ರಕರ್ತರೊಬ್ಬರು ಅವರನ್ನು ಟೀಮ್ ಇಂಡಿಯಾ ಜೊತೆ ಕೈಕುಲುಕದಿರುವ ನಿರ್ಧಾರ ಅವರದ್ದೇ ಅಥವಾ ಬೇರೆಯವರದ್ದೇ ಎಂದು ಕೇಳಿದರು.

ಕ್ರೀಡಾ ಮನೋಭಾವವನ್ನು ಮೀರಿ ಹಲವು ವಿಷಯಗಳಿವೆ: ಸೂರ್ಯ
ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಜೀವನದಲ್ಲಿ ಕ್ರೀಡಾ ಮನೋಭಾವಕ್ಕಿಂತ ಕೆಲವು ವಿಷಯಗಳು ದೊಡ್ಡವು ಎಂದು ಹೇಳಿದರು. ‘‘ನಾವು ಇಲ್ಲಿಗೆ ಕ್ರಿಕೆಟ್ ಆಡಲು ಮಾತ್ರ ಬಂದಿದ್ದೇವೆ ಮತ್ತು ಅದನ್ನೇ ನಾವು ಮಾಡಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮರಣ ಹೊಂದಿದವರಿಗೆ ಮಾತ್ರ ಈ ಗೆಲುವು ಸಮರ್ಪಿತವಾಗಿದೆ ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತಾನು ಈಗಾಗಲೇ ಹೇಳಿದ್ದೇನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನಮ್ಮನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ನಮ್ಮ ದೇಶಕ್ಕೆ ಸಂತೋಷವನ್ನು ನೀಡುತ್ತಲೇ ಇರಬೇಕು’’ ಎಂದು ಸೂರ್ಯ ಹೇಳಿದರು. ಸೂರ್ಯನ ಈ ಹೇಳಿಕೆಯು ನಿನ್ನೆ ರಾತ್ರಿಯಿಂದ ಕ್ರೀಡಾ ಮನೋಭಾವದ ಬಗ್ಗೆ ಮಾತನಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸಿದೆ.

ಯಾಕೆ ಈ ಬೆಳವಣಿಗೆ?
ಇದೇ ವರ್ಷ ಏಪ್ರಿಲ್ ನಲ್ಲಿ ಕಾಶ್ಮೀರದ ಪಹಲ್ಗಾಮ್ ಬಳಿ ಪಾಕ್ ಪ್ರೇರಿತ ಉಗ್ರಗಾಮಿಗಳು ಅಮಾಯಕ ಪ್ರವಾಸಿಗರನ್ನು ಗುರಿಯಾಗಿ ಗುಂಡಿನ ದಾಳಿ ನಡೆಸಿದ್ದರು. ಅದರಲ್ಲಿ ಭಾರತದ 26 ಅಮಾಯಕ ನಾಗರಿಕರು ಹತ್ಯೆಗೀಡಾಗಿದ್ದರು. ಇದಕ್ಕೆ ಉತ್ತರವಾಗಿ ಭಾರತದ ಸೇನೆಯು ಪಾಕಿಸ್ತಾನದ ಉಗ್ರಗಾಮಿ ಅಡಗುದಾಣಗಳ ಮೇಲೆ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಕೈಗೊಂಡಿತ್ತು. ಈ ಘಟನೆಯಿಂದಾಗಿ ಎರಡೂ ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ.

ಜೊತೆಗೆ ಭಾರತ ಸರ್ಕಾರವೇ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸಂಬAಧ ಸಾಧ್ಯ ಇಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಿತ್ತು. ಆದರೆ ಇದೀಗ ಏಷ್ಯಾ ಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಪಂದ್ಯ ಆಡುತ್ತಿರುವುದಕ್ಕೆ ಭಾರತದಲ್ಲಿ ವ್ಯಾಪಕ ವಿರೋಧ ಇದೆ. ಭಯೋತ್ಪಾದಕ ರಾಷ್ಟ್ರದೊಂದಿಗೆ ಕ್ರಿಕೆಟ್ ಆಡುವುದು ಸಲ್ಲ ಎಂದು ಭಾರತದ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಆದರೆ ತನ್ನ ಭಾರತ ಸರ್ಕಾರ ತನ್ನ ಕ್ರೀಡಾ ನೀತಿಯನ್ನು ಸ್ಪಷ್ಟಪಡಿಸಿದೆ. ಅದರ ಪ್ರಕಾರ ಐಸಿಸಿ, ಎಸಿಸಿ ಆಯೋಜಿಸುವ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡುವುದಕ್ಕೆ ಅನುಮತಿ ಇದೆ. ಆದರೆ ಯಾವುದೇ ಕಾರಣಕ್ಕೂ ದ್ವಿಪಕ್ಷೀಯ ಸರಣಿಯನ್ನು ಆಡುವ ಹಾಗಿಲ್ಲ ಎಂದು ತಿಳಿಸಲಾಗಿದೆ. ಅದರಂತೆ ಇದೀಗ ಭಾರತ ತಂಡ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಆಡುತ್ತಿದೆ. ಒಂದು ಇತ್ತಂಡಗಳು ಫೈನಲ್ ವರೆಗೆ ತಲುಪಿದರೆ ಒಟ್ಟು 3 ಬಾರಿ ಆಡಬೇಕಾಗುತ್ತದೆ.

ಭಾರತ ತಂಡ ಪಾಕಿಸ್ತಾನದ ವಿರುದ್ದ ತನ್ನ ಸೈಲೆಂಟ್ ಪ್ರತಿಭಟನೆ ನಡೆಸುವುದಾಗಿ ಪಂದ್ಯಕ್ಕೂ ಮುನ್ನ ವರದಿಯಾಗಿತ್ತು. ಈಗ ಈ ರೀತಿಯಾಗಿ ತನ್ನ ಅಸಮಾಧಾನವನ್ನು ಹೊರಹಾಕಿದೆ. ಬಹುಷಃ ಟೂರ್ನಿಯುದ್ದಕ್ಕೂ ಇದೇ ವಾತಾವರಣ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";