ಬೆಂಗಳೂರು: ಈ ಸರಕಾರವು ಜನಸಾಮಾನ್ಯರ ತೆರಿಗೆಯಿಂದ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಟೀಕಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಸುರಕ್ಷತೆ, ಅಭಿವೃದ್ಧಿ ಮತ್ತು ಜನತೆಯ ಕ್ಷೇಮವನ್ನು ರಾಜ್ಯ ಸರಕಾರ ಕಾಯಬೇಕಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರವು ಜನಸಾಮಾನ್ಯರ ತೆರಿಗೆಯಿಂದ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.ಇದಕ್ಕಾಗಿ ಗಣರಾಜ್ಯೋತ್ಸವದ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರಕಾರ ನೀಡಿದ ಜಾಹೀರಾತಿನಲ್ಲಿ ಬನ್ನಿ ಗಾಂಧಿ ಭಾರತವನ್ನು ನಿರ್ಮಿಸೋಣ ಎಂದು ತಿಳಿಸಿದ್ದಾರೆ. ಯಾವ ಗಾಂಧಿ, ಸೋನಿಯಾ ಗಾಂಧಿಯೇ? ರಾಹುಲ್ ಗಾಂಧಿಯೇ ಅಥವಾ ಪ್ರಿಯಾಂಕ ಗಾಂಧಿಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಎಷ್ಟು ತಳಮಟ್ಟಕ್ಕೆ ಇಳಿದಿದೆ ಎಂದರೆ, ಮಹಾತ್ಮ ಎಂಬ ಎಂಬ ಪದ ಬಳಸುವ ಸೌಜನ್ಯವೂ ಈ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು. ಮಹಾತ್ಮ ಎಂದು ಬಳಸಿದರೆ ಅದು ರಾಷ್ಟ್ರಪಿತ ಗಾಂಧಿಯನ್ನು ಜನರಿಗೆ ನೆನಪಿಸಿದಂತಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಆ ಪದವನ್ನೇ ಕೈಬಿಟ್ಟಿದ್ದಾರೆ. ಗಾಂಧಿ ಎಂದರೆ ರಾಹುಲ್ ಗಾಂಧಿ ಎಂಬ ಅರ್ಥ ಬರಲೆಂದು ಗಾಂಧಿ ಭಾರತ ನಿರ್ಮಿಸೋಣ ಎಂಬುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸರಕಾರ ಕೊಟ್ಟ ಜಾಹೀರಾತಿನಲ್ಲಿ ಸಂವಿಧಾನದ ಪ್ರಸ್ತಾವನೆಯನ್ನೂ ನೀಡಿದ್ದು, ಫೈತ್ ಶಬ್ದದ ಬದಲು ನಂಬಿಕೆ ಪದ ಬಳಸಬೇಕಿತ್ತು. ಆ ಅನುವಾದ ಎಲ್ಲಿದೆ? ಮಾತು ಮಾತಿಗೆ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಳ್ಳುವ ಈ ಕಾಂಗ್ರೆಸ್ಸಿಗರು, ನಕಲಿ ಗಾಂಧಿಗಳು ಪ್ರಸ್ತಾವನೆಯನ್ನು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು. ಇದು ಸಂವಿಧಾನಕ್ಕೆ ಅಪಚಾರ ಎಂದು ತಿಳಿಸಿದರು. ಬಳ್ಳಾರಿಯಲ್ಲಿ ನಿನ್ನೆ ಹಾಡಹಗಲೇ ವೈದ್ಯನ ಅಪಹರಣ ಆಗಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಅಪಹರಿಸಿದ್ದಾರೆ. ಬಳಿಕ ಎರಡು ಕೋಟಿ ಹಣ,3 ಕೋಟಿ ಬಂಗಾರ ಕೊಟ್ಟರೆ ವೈದ್ಯರನ್ನು ಬಿಡುಗಡೆ ಮಾಡುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಮನೆಯವರಿಗೆ ಫೋನ್ ಮಾಡಿದ್ದಾರೆ. ಅವರನ್ನು ಸುರಕ್ಷಿತವಾಗಿ ರಕ್ಷಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಅಪಹರಣ ಆಗಿ ಕೇವಲ ಒಂದು ಗಂಟೆಯಲ್ಲಿ ಬಿಜೆಪಿಗೆ ಮಾಹಿತಿ ಬಂದಿತ್ತು. ತನಿಖೆಗೆ ಅಡ್ಡಿ ಆಗಬಾರದು; ಅಪಹೃತರ ಜೀವಕ್ಕೆ ಹಾನಿ ಆಗಬಾರದೆಂದು ನಾವಿದನ್ನು ಬಹಿರಂಗಪಡಿಸಲಿಲ್ಲ ಎಂದು ಪಿ. ರಾಜೀವ್ ಅವರು ತಿಳಿಸಿದರು.
ಈ ಸರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದೆಯೇ? ಎಂದು ಪ್ರಶ್ನಿಸಿದರು. ಅವರು ಉರ್ದುವಿನಲ್ಲಿ ಮಾತನಾಡುತ್ತಿದ್ದರು. ಈ ಸರಕಾರ ಯಾರಿಗೆ ಭರವಸೆ ಮೂಡಿಸುತ್ತಿದೆ? ನಾವೇನು ಮಾಡಿದರೂ ನಡೆದುಹೋಗುತ್ತದೆ ಎಂಬ ಸಂದೇಶವನ್ನು ಸರಕಾರ ಯಾರಿಗೆ ಕೊಡುತ್ತಿದೆ? ಆರೋಪಿಗಳನ್ನು ಪತ್ತೆ ಮಾಡಲು ಸರಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಆತ್ಮಹತ್ಯೆಗಳೂ ಆಗುತ್ತಿವೆ; ಹಗಲಿನಲ್ಲಿ ಬ್ಯಾಂಕ್ ದರೋಡೆ ನಡೆಯುತ್ತಿದೆ. ಅತ್ಯಾಚಾರ ಪ್ರಕರಣಗಳೂ ಹೆಚ್ಚಾಗಿವೆ. ಅಮಾಯಕರನ್ನು ಪೊಲೀಸರು ಬಂಧಿಸಿ ಕೇಸಿನಲ್ಲಿ ಫಿಕ್ಸ್ ಮಾಡುತ್ತಿದ್ದಾರೆ. ಈಗ ಅಪಹರಣ ಆರಂಭಗೊಂಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಸಚಿವರು ಅತ್ಯಂತ ವಿಫಲವಾಗಿರುವ ‘ಫೈಲ್ಡ್ ಹೋಂ ಮಿನಿಸ್ಟರ್’ ಎಂದರು.