ಬೀದರ್ : ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕಾರ್ಖಾನೆಗಳಿಂದ ಜಲ ಮೂಲಗಳಿಗೆ ವಿಷಕಾರಿ ತ್ಯಾಜ್ಯ ಸೇರಿ ಮಾಲಿನ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ 8 ಟೈರ್ ಪೈರೋಲಿಸಿಸ್ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಈಗಾಗಲೇ ಆದೇಶ ನೀಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ತಾವು ಪರಿಸರ ಖಾತೆ ವಹಿಸಿಕೊಂಡ ಬಳಿಕ ಹುಮನಾಬಾದ್ ಕೈಗಾರಿಕಾ ಪ್ರದೇಶದ ಮಾಲಿನ್ಯ ನಿಯಂತ್ರಣಕ್ಕೆ ಮತ್ತು ಅಕ್ರಮ ಕೈಗಾರಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿ, ಮೇ 30ರಂದೇ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೀವ್ರ ಸ್ವರೂಪದಲ್ಲಿ ಮಾಲಿನ್ಯ ಉಂಟು ಮಾಡುತ್ತಿದ್ದ 8 ಟೈರ್ ಪೈರೋಲಿಸಿಸ್ ಘಟಕಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದಾರೆ. ಮತ್ತು ಎರಡು ಔಷಧ ತಯಾರಿಕಾ ಘಟಕ ಮುಚ್ಚಲೂ ಅಂತಿಮ ನೋಟಿಸ್ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹುಮನಾಬಾದ್ ಕೈಗಾರಿಕಾ ವಲಯದಲ್ಲಿ ಟೈರ್ ಪೈರೋಲಿಸಿಸ್ ಘಟಕಗಳಿಂದ ಹೆಚ್ಚಿನ ಜಲ ಮಾಲಿನ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಕೆ.ಐ.ಎ.ಡಿ.ಬಿ.ನಲ್ಲಿರುವ ಎಂ.ಕೆ ಇಂಡಸ್ಟ್ರೀಸ್, ಕೆ.ಜಿ.ಎನ್. ಇಂಡಸ್ಟ್ರೀಸ್, ಎಂ.ಬಿ. ಇಂಡಸ್ಟ್ರೀಸ್, ಓ.ಆರ್. ಪೈರೋಲೈಸಿಸ್ ಪ್ಲಾಂಟ್, 6ಎಚ್ ಇಂಡಸ್ಟ್ರೀಸ್, ಲಿಮ್ರಾ ಇಂಡಸ್ಟ್ರೀಸ್, ಪಯೋನೀರ್ ಇಂಡಸ್ಟ್ರೀಸ್ ಮತ್ತು ನ್ಯೂ ಹಿಮಾಲಯ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಜಲ ಮೂಲಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತಾವು ನೀಡಿದ್ದ ಸೂಚನೆಯಂತೆ ಜುಲೈ 23 ಮತ್ತು 24 ರಂದು ಹುಮ್ನಾಬಾದ್ ಕೈಗಾರಿಕಾ ಪ್ರದೇಶಕ್ಕೆ ಬೆಂಗಳೂರಿನ ಕೇಂದ್ರ ಕಚೇರಿಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಸಾರ್ವಜನಿಕರು ಮತ್ತು ಜನ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ, ಕೆಲವು ಕೈಗಾರಿಕೋದ್ಯಮಿಗಳಿಗೆ ಘಟಕ ಮುಚ್ಚಲು ಸೂಚನೆ ನೀಡಿದ್ದಲ್ಲದೆ, ಈ ಪ್ರದೇಶದ ಎಲ್ಲ ಉದ್ದಿಮೆದಾರರಿಗೆ ಪರಿಸರ ರಕ್ಷಣೆ ಮಾಡುವಂತೆ ಮನವಿ ಮಾಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕೊಲ್ಹಾರ ಕೈಗಾರಿಕಾ ಪ್ರದೇಶದಲ್ಲೂ ಕ್ರಮ:
ಬೀದರ್ ಜಿಲ್ಲೆಯ ಕೊಲ್ಹಾರ ಕೈಗಾರಿಕಾ ಪ್ರದೇಶವನ್ನು 40 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು, ಇಲ್ಲಿನ ಮಣ್ಣು ಮತ್ತು ಅಂತರ್ಜಲವೂ ಕಲುಷಿತವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ ಜೂನ್ 2, 3 ಮತ್ತು 4ರಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಕೊಲ್ಹಾರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದು, ವರದಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೊಳವೆ ಬಾವಿಗೆ ತ್ಯಾಜ್ಯ: ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಕಾರ್ಖಾನೆಗಳು ವಿಷಕಾರಿಯಾದ ತ್ಯಾಜ್ಯವನ್ನು ಕೊಳವೆ ಬಾವಿಗಳಿಗೆ, ನದಿ, ಕೆರೆ ಮತ್ತು ಹಳ್ಳಕ್ಕೆ ಹರಿಸುತ್ತಿದ್ದು, ಇದರಿಂದ ಹರಿಯುವ ನೀರು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ. ಇಂತಹ ಕೈಗಾರಿಕೆಗಳಿಂದ ಕುಡಿಯುವ ನೀರೂ ವಿಷವಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಾಡದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಳಸಿದ ಆಯಿಲ್ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ತ್ಯಾಜ್ಯ ತೈಲವನ್ನು ಕೂಡ ಕೆಲವರು ಗುಂಡಿ ತೋಡಿ ಭೂಮಿಯ ಒಡಲಿಗೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಇವೆ. ಈ ಬಗ್ಗೆಯೂ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.