ಏಪ್ರಿಲ್‌ 22 ರಂದು ನಮ್ಮ ಕಾಶ್ಮೀರ – ನಮ್ಮ ಹೊಣೆ ರಾಷ್ಟ್ರೀಯ ಸಂವಾದ ಕಾರ್ಯಕ್ರಮ

ಬೆಂಗಳೂರು : ಅನಂತ ಕುಮಾರ್‌ ಪ್ರತಿಷ್ಠಾನವೂ ಅದಮ್ಯ ಚೇತನದ ಸಹಕಾರದೊಂದಿಗೆ ಏಪ್ರಿಲ್‌ 22 ರಂದು ನಮ್ಮ ಕಾಶ್ಮೀರ – ನಮ್ಮ ಹೊಣೆ ರಾಷ್ಟ್ರೀಯ ಸಂವಾದವನ್ನು ಆಯೋಜಿಸಿದೆ. ಭಾರತದ ಮುಕುಟಮಣಿ ಎಂದೇ ಖ್ಯಾತಿ ಹೊಂದಿರುವ ಕಾಶ್ಮೀರ, ಪ್ರತ್ಯಕ್ಷ ಶಾರದಾಮಾತೆಯ ಆವಾಸಸ್ಥಾನ. ಅದಕ್ಕಾಗಿಯೇ “ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ” ಎಂದು ನಿತ್ಯವೂ ನಮಸ್ಕರಿಸುವ ಪದ್ಧತಿ ರೂಢಿಗೆ ಬಂದಿದೆ. ಇಲ್ಲಿನ ಸರ್ವಜ್ಞ ಪೀಠವು ಹಿಂದಿನಿಂದಲೂ ಮಹಾನ್ ವಿದ್ವಾಂಸರ ನೆಲೆಯಾಗಿತ್ತು. ಶ್ರೀ ಶಂಕರಾಚಾರ್ಯರು ಅಲ್ಲಿಗೆ ಹೋಗಿ ಆ ಮಹಾನ್ ವಿದ್ವಾಂಸರನ್ನು ವಾದದಲ್ಲಿ ಗೆದ್ದು ಸರ್ವಜ್ಞ ಪೀಠವನ್ನು ಏರಿದ ಐತಿಹ್ಯವಿದೆ. ಇಂತಹ ಶ್ರೇಷ್ಠ ಸ್ಥಳವು ಸ್ವಾತಂತ್ರ್ಯಾನಂತರ ಆಡಳಿತಗಾರರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ವಿವಾದದ ಸ್ಥಳ ಎಂಬ ಹಣೆಪಟ್ಟಿ ಪಡೆಯುವಂತಾಯಿತು. ಇಡೀ ಕಾಶ್ಮೀರ ಒಂದೆರಡು ಕುಟುಂಬಗಳ ಆಸ್ತಿಯೆಂಬಂತೆ ಸ್ವೇಚ್ಛಾಚಾರ ತಾಂಡವವಾಡತೊಡಗಿತು. ಕೆಲವು ನಾಯಕರ ದೇಶದ್ರೋಹಿ ವರ್ತನೆಯಿಂದ ಪಾಕ್ ಪ್ರಚೋದಿತ ಭಯೋತ್ಪಾದಕರ ಹಾವಳಿ ತೀವ್ರವಾಯಿತು.

1990 ರಲ್ಲಿ ನಡೆದ ಘಟನೆಯಂತೂ ಇಡೀ ದೇಶವೇ ತಲೆತಗ್ಗಿಸುವಂತಹದು. ಅಲ್ಲಿನ ಮೂಲನಿವಾಸಿಗಳಾದ ಕಶ್ಮೀರಿ ಹಿಂದೂಗಳ ಮೇಲೆ ಅಮಾನುಷ ಅತ್ಯಾಚಾರ ಅನಾಚಾರ ನಡೆದು ಅವರು ಎಲ್ಲವನ್ನೂ ಕಳೆದುಕೊಂಡು ಓಡಿಹೋಗುವಂತಾಯಿತು. ಇದೀಗ ಭಾರೀ ಸುದ್ದಿ ಮಾಡಿರುವ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಇವೆಲ್ಲವನ್ನೂ ದೇಶದ ಜನರ ಮುಂದಿಟ್ಟಿದೆ. ಇದರಿಂದಾಗಿ ಭಾರಿ ಜನಜಾಗೃತಿ ಕಂಡುಬರುತ್ತಿದೆ. ಜೊತೆಗೆ ಕಾಶ್ಮೀರಕ್ಕಾಗಿ, ಕಶ್ಮೀರಿ ಹಿಂದುಗಳಿಗಾಗಿ ನಾನು ಏನಾದರೂ ಮಾಡಬೇಕು ಎಂಬ ತುಡಿತವೂ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 22 ರಂದು ಸಾಯಂಕಾಲ 6 ಗಂಟೆಗೆ “ನಮ್ಮ ಕಾಶ್ಮೀರ – ನಮ್ಮ ಹೊಣೆ” ಎಂಬ ಸಂವಾದ ಕಾರ್ಯಕ್ರಮವನ್ನು ಜಯನಗರದ ಎನ್‌ ಎ ಎಲ್‌ ಕಾಲೋನಿ ಕಾಶ್ಮೀರ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಆರ್.ಕೆ.ಮಟ್ಟೂ , ಶ್ರೀ ಪ್ರಕಾಶ್ ಬೆಳವಾಡಿ , ಶ್ರೀಮತಿ ಸಹನಾ ವಿಜಯ ಕುಮಾರ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಪ್ರೊ ಪಿ ವಿ ಕೃಷ್ಣಭಟ್, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ ಉಪಸ್ಥಿತರಿರಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top