ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಅಧಿಕಾರಿಗಳು ಕೆಲಸ ಮಾಡಿ ನಾಡಿನ ಜನರ ನಿರೀಕ್ಷೆಗೆ ಸ್ಪಂದಿಸಿ

ಸರ್ಕಾರ ಎಂದರೆ ಟ್ರಸ್ಟ್. ನಾಡಿನ ಜನರ ಟ್ರಸ್ಟ್ ಇದ್ದ ಹಾಗೆ ಎನ್ನುವುದನ್ನು ನೆನಪಿಡಿ

ಸ್ಥಳೀಯ ಸಮಸ್ಯೆಗಳಿಗೆ ನೀವು ಸ್ಪಂದಿಸದಿದ್ದರೆ-ನಾಡಿನ ಜನ ನನ್ನ ಬಳಿಗೆ ಬರುತ್ತಾರೆ

ಜಿಲ್ಲಾಧಿಕಾರಿಗಳು-ಸಿ ಇ ಒ ಗಳು- ತಹಶೀಲ್ದಾರರು ಜನ ಸಂಪರ್ಕ ಸಭೆ ನಡೆಸಿ ಜನರಿಗೆ ಸ್ಪಂದಿಸಿ

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು : ತಾಲ್ಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ  ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

          ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

          ನಾಡಿನ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ ಎಂದರೆ ನೀವುಗಳು ಇದ್ದು ಏನು ಪ್ರಯೋಜನ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. 

ಮುಖ್ಯಮಂತ್ರಿಯಾದ ಬಳಿಕ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆ ವೇಳೆ ಜನ ಸಾಮಾನ್ಯರು ನೂರಾರು ರೀತಿಯ ಮನವಿಗಳನ್ನು ನನಗೆ ನೀಡುತ್ತಿದ್ದಾರೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನ ಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ. ಕೆಲವೊಂದು ಸಮಸ್ಯೆಗಳಿಗೆ ವಾರದ ಕಾಲ ಮಿತಿಯಲ್ಲಿ ಪರಿಹಾರ ಒದಗಿಸಿ ಕೊಡಿ. ಕೆಲಸ ಆಗಿದೆಯಾ , ಇಲ್ಲವಾ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನ ತನಕ ಬರುವ ಅಗತ್ಯವೇ ಬೀಳುವುದಿಲ್ಲ ಎಂದು ತಿಳಿಸಿದರು.

 

           ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳ ಆರಂಭಿಕ ಮಾತುಗಳು

          ಕೇವಲ ಬದಲಾವಣೆಗಾಗಿ ನಾಡಿನ ಜನತೆ ಸರ್ಕಾರವನ್ನು ಬದಲಾಯಿಸಿಲ್ಲ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಹಿಂದಿನ ಸರ್ಕಾರವನ್ನು ಬದಲಾಯಿಸಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ

          ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು

 

          ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು. ಈ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ನಾವ್ಯಾರು ರಾಜರುಗಳಲ್ಲ

ನ್ಯಾಯ ವಿಳಂಬ ಸರ್ಕಾರ ಸುತಾರಾಂ ಸಹಿಸಲ್ಲ: ಕಠಿಣ ಕ್ರಮ ಕಾದಿದೆ 

ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬರುವ ಅರ್ಜಿಗಳು 5 ವರ್ಷಕ್ಕೂ ಹೆಚ್ಚು ಅವಧಿಗೆ ಬಾಕಿ ಉಳಿದಿರುವುದನ್ನು ಗಮನಿಸಲಾಗಿದೆ. 5 ವರ್ಷವಾದರೂ ಪ್ರಕರಣ ಇತ್ಯರ್ಥಪಡಿಸದೆ ಇದ್ದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ.

ವಿಳಂಬ ಜಾಸ್ತಿಯಾದಷ್ಟು ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ವಿಳಂಬವೂ ಭ್ರಷ್ಟಾಚಾರವೇ. ವಿಳಂಬ ಮಾಡಿದರೆ, ತಹಸೀಲ್ದಾರರು ಒಂದು ಅರ್ಜಿಯನ್ನು ಸ್ವೀಕರಿಸಿದರೆ, ಮೂರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಉಪವಿಭಾಗಾಧಿಕಾರಿಗಳ ಬಳಿ ಬರುವ ಮನವಿಗಳ ಇತ್ಯರ್ಥಕ್ಕೆ ಬಹಳ ವಿಳಂಬ ಮಾಡ್ತಾರೆ. ಇದನ್ನು ಕನಿಷ್ಠ ಆರು ತಿಂಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಒಂದು ವರ್ಷದಲ್ಲಿ ಇತ್ಯರ್ಥ ಮಾಡಬೇಕು.

ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಪ್ರಕರಣ ಮುಂದೂಡುವುದು, ಕಕ್ಷಿದಾರರನ್ನು ಕಾಯಿಸುವುದು, ವಾದ-ವಿವಾದಗಳನ್ನು ಆಲಿಸಿದ ನಂತರ ತೀರ್ಪು ಬರೆಯಲು ವಿಳಂಬ ಮಾಡುವುದು ತರವಲ್ಲ.

 

ಪ್ರಕರಣ ಇತ್ಯರ್ಥಗೊಳಿಸಲು ವಿಳಂಬ ಮಾಡಿದರೆ ನಮ್ಮ ಸರ್ಕಾರ ಸಹಿಸಲ್ಲ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top