ಪರಿಹಾರಕ್ಕಾಗಿ ಹೈಕಮಾಂಡ್ ಮುಂದೆ ಅರ್ಜಿ ಹಿಡಿದುಕೊಂಡು ನಿಲ್ಲುವ ಕಾಲ ಈಗಿಲ್ಲ

ಅಧಿಕಾರಕ್ಕೆ ಬರದಿರುವ ಕಾಂಗ್ರೆಸ್ ಸುಳ್ಳು ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬರದಿರುವ ಕಾಂಗ್ರೆಸ್ ಸುಳ್ಳು ಗ್ಯಾರೆಂಟಿ ಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 200 ಸ್ಥಾನಕ್ಕೆ  ಸ್ಪರ್ಧಿಸಿ  ಸರ್ಕಾರ ಮಾಡುತ್ತೇವೆ ಎನ್ನುತ್ತಾರೆ. ಲೋಕಸಭೆಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸುತ್ತಿಲ್ಲ. ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೇ ಮಾಡದೇ ಅವರು ಅಧಿಕಾರಕ್ಕೆ ಹೇಗೆ ಬರುತ್ತಾರೆ? ಎಂದು ಪ್ರಶ್ನಿಸಿದರು.

 

ಡಿಎಂಕೆದು ಪ್ರಣಾಳಿಕೆ ಬೇರೆ, ಟಿಎಂಸಿದು ಬೇರೆ, ಇನ್ನು ಆಮ್‌ ಆದ್ಮಿ ಪಕ್ಷದ್ದು ಬೇರೆ. ಕಾಂಗ್ರೆಸ್‌ದು ಮತ್ತೊಂದು. ಜನರು ಯಾವುದನ್ನು ನಂಬಬೇಕು ಹೇಳಿ. ಜನರಿಗೆ ಅಪ್ಪಟ ಸುಳ್ಳು ಹೇಳಿ ಇಂತಹ ಆ‍ಶ್ವಾಸನೆ ಕೊಡುತ್ತಿದ್ದಾರೆ. ಒಂದು ಲಕ್ಷ ಕೊಡುತ್ತೇವೆ, ಎರಡು ಲಕ್ಷ ಕೊಡುತ್ತೇವೆ ಎಂದು ಜನರಿಗೆ ಕಾಂಗ್ರೆಸ್‌, ಸುಳ್ಳು ಹೇಳಿ ಮೋಸ ಮಾಡುವುದನ್ನು ಬಿಡಬೇಕು. ಕೆಲವು ಸ್ಥಾನಗಳಿಗಷ್ಟೇ ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿದೆ.  ಮೊದಲು 543 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ,ಆಮೇಲೆ ಇಂತಹ ಆಶ್ವಾಸನೆ ಕೊಡಿ ಎಂದು ಬೊಮ್ಮಾಯಿ ಕಾಂಗ್ರೆಸಿಗೆ ಸವಾಲು ಹಾಕಿದರು.  

ಬರ ಪರಿಸ್ಥಿತಿಗೆ  ಕಾಂಗ್ರೆಸ್‌ ಸರ್ಕಾರವೇ ಕಾರಣ

ರಾಜ್ಯದ ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿಯನ್ನು ಕಳುಹಿಸುವಾಗ ಕರ್ನಾಟಕದ ವಾಸ್ತವ ಸ್ಥಿತಿಯನ್ನು ಕಳಿಸಿರಲಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣವನ್ನು ಬಿಡುಗಡೆ ಮಾಡಲಿ ಎಂದರು.

 ರಾಜಕೀಯ ಪ್ರೇರಿತ ದೃಷ್ಟಿಯಿಂದ ಸಿದ್ದರಾಮಯ್ಯ ಬರಪರಿಹಾರಕ್ಕಾಗಿ ಸುಪ್ರಿಂಕೋರ್ಟಿಗೆ ಹೋಗಿದ್ದಾರೆ. 15 ನೇ ಹಣಕಾಸು ಆಯೋಗದಲ್ಲಿ ಅನುದಾನ ಕಡಿಮೆ ಆಗಲು ಸಿದ್ದರಾಮಯ್ಯನವರು ಕಾರಣ. ಕೇಂದ್ರಕ್ಕೆ ಅವರು ರಾಜ್ಯದ ನೈಜ್ಯಸ್ಥಿತಿಯನ್ನ ಆಗಿನ ಸರ್ಕಾರ ಹೇಳಿಕೊಳ್ಳಲಿಲ್ಲಾ ಅದಕ್ಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಯುಪಿಎ ಸರ್ಕಾರ ಇದ್ದಾಗ 8-10 ತಿಂಗಳ ನಂತರ ಪರಿಹಾರ ನೀಡಿದ ಉದಾಹರಣೆಯಿದೆ. ಇವರಿಗೆ ರೈತರ ಬಗ್ಗೆ ಕಳಕಳಿ ಇಲ್ಲಾ. ರೈತ ವಿರೋಧಿ ಸರ್ಕಾರ ಇದಾಗಿದೆ ಎಂದರು.

 

ರಾಜ್ಯದ ಬಿಜೆಪಿಯ 25 ಸಂಸದರು ಪುಕ್ಕಲರು ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಒಂದು ವ್ಯವಸ್ಥೆಯೊಳಗೆ ಕೆಲಸ ಮಾಡುವಾಗ ವ್ಯಕ್ತಿಗತ ಪ್ರಶ್ನೆ ಎನ್ನುವುದು ಬರುವುದಿಲ್ಲ. ನರೇಂದ್ರ ಮೋದಿಯವರ ಕಾಲದಲ್ಲಿ ಯಾವುದೇ ಲಾಭಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹೀಗಾಗಿ ರಾಜ್ಯಕ್ಕೆ ಕೇಂದ್ರಕ್ಕೆ ಏನು ಸಿಗಬೇಕು ಅದೆಲ್ಲವೂ ಸಿಗುತ್ತದೆ ಎಂದರು.

ಕಾಂಗ್ರೆಸ್‌ನವರು ಹೈಕಮಾಂಡ್‌ ಕಡೆ ಹೋಗಿ ಅರ್ಜಿ ಕೊಡಬೇಕು. ಇದು ಕಾಂಗ್ರೆಸ್‌ನವರ ಸ್ಟೈಲ್‌. ಇವರ ರೀತಿ ಬಿಜೆಪಿಯವರಾದ ನಾವು ಮಾಡಲು ಬರುವುದಿಲ್ಲ. ಕಾಂಗ್ರೆಸ್‌ನವರಂತೆ ನಾವು ಮೋದಿಯವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಶ್ನೆಯೇ ಇಲ್ಲ. ನಾವು ಮೋದಿಯವರ ಜೊತೆಗೆ ನಿಲ್ಲುತ್ತೇವೆ. ಅವರನ್ನು ಬೆಂಬಲಿಸುತ್ತೇವೆ ಎಂದರು.

 

60 ವರ್ಷದಲ್ಲಿ ಹೈವೇ ಕೆಲಸ ಮಾಡಲು ಕಾಂಗ್ರೆಸ್‌ನವರಿಂದ ಆಗಿಲ್ಲ. ಆದರೆ, ನಾವು ಈಗಾಗಲೇ ನಾವು 3500 ಕಿಮೀ ಹೈವೇ ಕೆಲಸ ಮಾಡಿದ್ದೇವೆ. ಬರೀ ಐದು ವರ್ಷದಲ್ಲಿ 3500 ಕಿಮೀ ಹೈವೇ ಕೆಲಸವನ್ನು ಮಾಡಿದ್ದೇವೆ. ಇನ್ನೂ  ಮೂರು ಸಾವಿರ ಕಿ ಮೀ. ಹೈವೇ ಕೆಲಸ ಅನುಮೋದನೆ ಆಗಿದೆ. ರೈಲ್ವೆದಲ್ಲಿಯೂ ಕೂಡ ಕಳೆದ ಬಜೆಟ್ ನಲ್ಲಿ 3500-7000 ಕಿಮೀ ವರೆಗೆ ಅನುಮೋದನೆ ಆಗಿದೆ. ಇಂತಹ ಕೆಲಸಗಳನ್ನು ನಾವೇನು ಕೇಂದ್ರಕ್ಕೆ ಅರ್ಜಿ ಕೊಟ್ಟು ಮಾಡಿಸಿಲ್ಲಾ. ಕೇಂದ್ರದ ಬಿಜೆಪಿಯೇ ಅದನ್ನು ಸ್ವಯಂ ಪ್ರೇರಿತವಾಗಿಯೇ ಮಾಡಿದೆ ಎಂದು ಕೇಂದ್ರ ಸರ್ಕಾರದ  ನಡೆಯನ್ನು ಸಮರ್ಥಿಸಿಕೊಂಡರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top