ಬೆಂಗಳೂರು: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 'ಡಿಫೆಂಡಿಂಗ್ ಚಾಂಪಿಯನ್' ಪಟ್ಟದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್‌ನಲ್ಲಿ 18 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿ ಟ್ರೋಫಿ ಗೆದ್ದಿದ್ದ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ, ಮಾರ್ಚ್ 28ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sಖಊ) ವಿರುದ್ಧ ಮೊದಲ ಪಂದ್ಯ ಆಡಲಿದೆ.
ಹ್ಯಾಜಲ್‌ವುಡ್ ಅಲಭ್ಯ: ಬೌಲಿಂಗ್ ವಿಭಾಗಕ್ಕೆ ಡಫಿ ಬಲ
ತಂಡದ ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್ ಗಾಯದ ಸಮಸ್ಯೆಯಿಂದಾಗಿ ಸೀಸನ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗವನ್ನು ಅನುಭವಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಹ್ಯಾಜಲ್‌ವುಡ್ ಬ್ಯಾಕಪ್ ಆಗಿ ತಂಡ ಸೇರಿರುವ ಜಾಕೋಬ್ ಡಫಿ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಮಿನಿ ಹರಾಜಿನ ಲಾಭ: ವೆಂಕಟೇಶ್ ಅಯ್ಯರ್ ದುಬಾರಿ ಆಟಗಾರ
2026ರ ಮಿನಿ ಹರಾಜಿನಲ್ಲಿ ಆರ್‌ಸಿಬಿ ಎಂಟು ಆಟಗಾರರನ್ನು ಖರೀದಿಸಿದೆ. ಇವರಲ್ಲಿ 7 ಕೋಟಿ ರೂಪಾಯಿ ನೀಡಿ ಖರೀದಿಸಿದ ವೆಂಕಟೇಶ್ ಅಯ್ಯರ್ ತಂಡದ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. 3ನೇ ಕ್ರಮಾಂಕಕ್ಕಾಗಿ ವೆಂಕಟೇಶ್ ಅಯ್ಯರ್ ಮತ್ತು ದೇವದತ್ ಪಡಿಕ್ಕಲ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಮ್ಯಾನೇಜ್‌ಮೆಂಟ್‌ಗೆ ಇದು ಸಿಹಿ ತಲೆನೋವಾಗಿ ಪರಿಣಮಿಸಿದೆ.
ಜೇಕ್ ಬೆಥೆಲ್ ಎಂಟ್ರಿ: ಟಿಮ್ ಡೇವಿಡ್ ಬೆಂಚ್‌ಗೆ?
ಇತ್ತೀಚೆಗೆ ಭಾರತದ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಯುವ ಆಟಗಾರ ಜೇಕ್ ಬೆಥೆಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಸ್ಟಾರ್ ಆಟಗಾರ ಟಿಮ್ ಡೇವಿಡ್ ಆರಂಭಿಕ ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಗಬಹುದು.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಫಿಲ್ ಸಾಲ್ಟ್ (ವಿದೇಶಿ ಆಟಗಾರ)
ವಿರಾಟ್ ಕೊಹ್ಲಿ
ವೆಂಕಟೇಶ್ ಅಯ್ಯರ್ / ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್ (ನಾಯಕ)
ಜೇಕ್ ಬೆಥೆಲ್ (ವಿದೇಶಿ ಆಟಗಾರ)
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ಕೃನಾಲ್ ಪಾಂಡ್ಯ
ರೊಮಾರಿಯೋ ಶೆಫರ್ಡ್ (ವಿದೇಶಿ ಆಟಗಾರ)
ಭುವನೇಶ್ವರ್ ಕುಮಾರ್
ಯಶ್ ದಯಾಳ್
ಜಾಕೋಬ್ ಡಫಿ (ವಿದೇಶಿ ಆಟಗಾರ)
ಇಂಪ್ಯಾಕ್ಟ್ ಪ್ಲೇಯರ್: ಸುಯೇಶ್ ಶರ್ಮಾ (ಲೆಗ್ ಸ್ಪಿನ್ನರ್)
ವಿಶೇಷ ಅಂಶಗಳು:
ಆರಂಭಿಕರು: ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಇನ್ನಿಂಗ್ಸ್ ಆರಂಭಿಸಲಿದೆ.
ಆಲ್-ರೌಂಡರ್ಸ್: ಕೃನಾಲ್ ಪಾಂಡ್ಯ ಮತ್ತು ಶೆಫರ್ಡ್ ತಂಡಕ್ಕೆ ಸಮತೋಲನ ನೀಡಲಿದ್ದಾರೆ.
ಫಿನಿಶರ್: ಜಿತೇಶ್ ಶರ್ಮಾ ಅವರು ಪಂದ್ಯ ಮುಕ್ತಾಯಗೊಳಿಸುವ ಜವಾಬ್ದಾರಿ ಹೊರಲಿದ್ದಾರೆ.
ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಹಠದಲ್ಲಿರುವ ಆರ್‌ಸಿಬಿ, ತವರು ನೆಲದಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.