ಬೆಂಗಳೂರು: ಲಿವ್-ಇನ್ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಲು ಬಂದಿದ್ದ ತಂದೆ-ತಾಯಿ ಹಾಗೂ ತಂಗಿಯನ್ನು ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ನಡೆದಿದೆ.
ಹತ್ಯೆಗೀಡಾದವರನ್ನು ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಮತ್ತು ಸುಪ್ರಿಯಾ (20) ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಕೊಲೆ ನಡೆಸಿ ಪರಾರಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಶ್ವೇತಾ ಕಳೆದ ಕೆಲವು ಸಮಯದಿಂದ ಕೆನತ್ ಜೊತೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿ ವಾಸಿಸುತ್ತಿದ್ದಳು. ಈ ಸಂಬಂಧಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಗಳನ್ನು ಮನವೊಲಿಸಿ ಮನೆಗೆ ಕರೆತರುವ ಉದ್ದೇಶದಿಂದ ಸೋಮಸುಂದರ್ ಅವರು ಪತ್ನಿ ಹಾಗೂ ಕಿರಿಯ ಮಗಳೊಂದಿಗೆ ಸೀಗೆಹಳ್ಳಿಯ ಡಾಮ್ನಿಕ್ ಲೇಔಟ್ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್ಮೆಂಟ್’ಗೆ ತೆರಳಿದ್ದರು.
ಈ ವೇಳೆ ಶ್ವೇತಾ ಹಾಗೂ ಕೆನತ್ ಜೊತೆ ಮಾತಿನ ಚಕಮಕಿ ನಡೆದಿದ್ದು, ಅದು ತೀವ್ರ ವಾಗ್ವಾದಕ್ಕೆ ತಿರುಗಿದೆ. ವಾಗ್ವಾದದ ನಡುವೆ ಪ್ರೇಮಿಗಳಿಬ್ಬರು ಸೇರಿ ತಂದೆ, ತಾಯಿ ಮತ್ತು ತಂಗಿಯ ಮೇಲೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ ಎನ್ನಲಾಗಿದೆ.
ತೀವ್ರ ಗಾಯಗೊಂಡ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಅವರು ಹೇಗೋ ಮನೆಯಿಂದ ಹೊರಬಂದು ಸಹಾಯಕ್ಕಾಗಿ ಕಿರುಚಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳು ಅವರನ್ನು ರಕ್ತದ ಮಡುವಿನಲ್ಲಿ ಕಂಡು ತಕ್ಷಣವೇ ‘112’ ತುರ್ತು ಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಹೊಯ್ಸಳ ಸಿಬ್ಬಂದಿ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರೂ, ಮಾರ್ಗಮಧ್ಯೆಯೇ ಅವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಆದರೆ ಸಾವನ್ನಪ್ಪುವ ಮುನ್ನ ನಡೆದ ಘಟನೆಯ ಕುರಿತು ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ನಡೆಸಿ ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ತ್ರಿವಳಿ ಹತ್ಯೆ ಪ್ರಕರಣ ಬೆಂಗಳೂರಿನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕುಟುಂಬ ಸಂಬಂಧಗಳ ಕುಸಿತ ಹಾಗೂ ಯುವಜನರ ನಡುವೆ ಹೆಚ್ಚುತ್ತಿರುವ ಘರ್ಷಣೆಗಳ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.