ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಸ್ಫೋಟಕ ಹಂತ ತಲುಪಿದ್ದು, ಜೂನ್ 17ರಂದು ಜಾರಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಸಂಪೂರ್ಣವಾಗಿ ಮುರಿದುಬಿದ್ದಿದೆ. ಅಮೆರಿಕ ಇರಾನ್‌ನ ಹಲವು ತಂತ್ರಜ್ಞಾನದ ಹಾಗೂ ಸೇನಾ ಗುರಿಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ, ಪ್ರತಿಯಾಗಿ ಇರಾನ್ ಬಹ್ರೇನ್, ಕುವೈತ್ ಹಾಗೂ ಕತಾರ್‌ನಲ್ಲಿರುವ ಗುರಿಗಳತ್ತ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಯೊಂದಿಗೆ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು. ಇದರ ಕೆಲವೇ ಗಂಟೆಗಳ ಬಳಿಕ ಅಮೆರಿಕದ ಸೇನೆ ಇರಾನ್ ವಿರುದ್ಧ ವೈಮಾನಿಕ ಕಾರ್ಯಾಚರಣೆ ಆರಂಭಿಸಿತು.
ಅಮೆರಿಕ ಸೇನೆಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುತ್ತಿರುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು 20 ಶೇಕಡಾ ಇದೇ ಜಲಸಂಧಿಯ ಮೂಲಕ ನಡೆಯುವುದರಿಂದ, ಈ ಪ್ರದೇಶದಲ್ಲಿ ಉಂಟಾಗುವ ಯಾವುದೇ ಸಂಘರ್ಷ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಪರಮಾಣು ವಿದ್ಯುತ್ ಸ್ಥಾವರ ಹೊಂದಿರುವ ಬುಶೆಹರ್ ಸೇರಿದಂತೆ ಚಬಹಾರ್, ಕೊನಾರಕ್, ಬಂದರ್ ಅಬ್ಬಾಸ್ ಹಾಗೂ ಸಿರಿಕ್ ಬಂದರು ನಗರಗಳಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ಆದರೆ ದಾಳಿಯಿಂದ ಉಂಟಾದ ಹಾನಿಯ ಸಂಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ.
ಇತ್ತ ಬಹ್ರೇನ್, ಕುವೈತ್ ಮತ್ತು ಕತಾರ್ ಕಡೆಗೆ ಇರಾನ್ ಉಡಾಯಿಸಿದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಪರಿಣಾಮದ ಕುರಿತು ಆರಂಭಿಕ ಮಾಹಿತಿ ಲಭ್ಯವಾಗಿಲ್ಲ. ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ, ಹಲವು ಡ್ರೋನ್‌ಗಳು ಹಾಗೂ ಕ್ಷಿಪಣಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
ನ್ಯಾಟೋ ಶೃಂಗಸಭೆಯಿಂದ ಹಿಂದಿರುಗಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿ ನಡೆದ ಸ್ಫೋಟಗಳ ವಿಡಿಯೊಗಳನ್ನು ಹಂಚಿಕೊಂಡು, “ಇದು ನಿನ್ನೆ ವ್ಯಾಪಾರ ಹಡಗುಗಳ ಮೇಲೆ ನಡೆದ ದಾಳಿಗೆ ನೀಡಿದ ಪ್ರತೀಕಾರ. ಮತ್ತೆ ಇಂತಹ ದಾಳಿ ನಡೆದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್, ಅಗತ್ಯವಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು, ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಡಿಸಲಿನೇಷನ್ ಘಟಕಗಳು ಹಾಗೂ ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನೂ ಗುರಿಯಾಗಿಸಬಹುದು ಎಂದು ಎಚ್ಚರಿಸಿದ್ದರು.
ಮಂಗಳವಾರ ಹಾರ್ಮುಜ್ ಜಲಸಂಧಿಯಲ್ಲಿ ಮೂರು ವ್ಯಾಪಾರ ಹಡಗುಗಳ ಮೇಲೆ ದಾಳಿ ನಡೆದ ಬಳಿಕ ಅಮೆರಿಕ ಮೊದಲ ಹಂತದ ವೈಮಾನಿಕ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಎರಡೂ ರಾಷ್ಟ್ರಗಳು ಮತ್ತೊಮ್ಮೆ ನೇರವಾಗಿ ಪರಸ್ಪರ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ತಾತ್ಕಾಲಿಕ ಕದನ ವಿರಾಮದ ಪ್ರಕಾರ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಹಡಗುಗಳ ಸಂಚಾರ ಮಾರ್ಗದ ಮೇಲಿನ ನಿಯಂತ್ರಣ ಇರಾನ್‌ಗೆ ಇರಬೇಕು ಹಾಗೂ ಮುಂದಿನ ದಿನಗಳಲ್ಲಿ ಸಂಚಾರ ಶುಲ್ಕ ವಸೂಲಿ ಮಾಡಲಾಗುವುದು ಎಂದು ಟೆಹ್ರಾನ್ ಪಟ್ಟು ಹಿಡಿದಿತ್ತು. ಈ ಬೇಡಿಕೆಯನ್ನು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದವು.
ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ಇತ್ತೀಚಿನ ಕಾರ್ಯಾಚರಣೆಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬಳಸುತ್ತಿದ್ದ 60ಕ್ಕೂ ಹೆಚ್ಚು ವೇಗದ ಸಣ್ಣ ದೋಣಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಇನ್ನೊಂದೆಡೆ, ಟ್ರಂಪ್ ಮಾತುಕತೆಗಳಿಗೆ ಅವಕಾಶ ಇನ್ನೂ ತೆರೆದಿದೆ ಎಂದು ಹೇಳಿದ್ದರೂ, “ಮಾತುಕತೆ ನಡೆಯಬಹುದು, ಆದರೆ ಅದು ಸಮಯ ವ್ಯರ್ಥವಾಗುವ ಸಾಧ್ಯತೆ ಹೆಚ್ಚು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ, “ಟ್ರಂಪ್ ಅವರ ಹೇಳಿಕೆ ಅಮೆರಿಕದ ಶಕ್ತಿಯ ಸಂಕೇತವಲ್ಲ; ಇರಾನ್ ವಿರುದ್ಧದ ಅಮೆರಿಕದ ನೀತಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ” ಎಂದು ತಿರುಗೇಟು ನೀಡಿದ್ದಾರೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ಕೂಡ, “ಬೆದರಿಕೆ ಮತ್ತು ಒತ್ತಡದ ರಾಜಕೀಯದ ಯುಗ ಮುಗಿದಿದೆ. ಇರಾನ್ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಬೆಳವಣಿಗೆಗಳಿಂದ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಭುಗಿಲೇಳುವ ಆತಂಕ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದರೆ ಜಾಗತಿಕ ತೈಲ ಪೂರೈಕೆ ಸರಪಳಿ, ಇಂಧನ ಬೆಲೆ ಹಾಗೂ ವಿಶ್ವ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.