ಮುಂಬೈ: ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಮಧ್ಯ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಕಾರ್ಮೋಡಗಳು ಭಾರತೀಯ ಷೇರು ಮಾರುಕಟ್ಟೆಯನ್ನು ಅಕ್ಷರಶಃ ನಡುಗಿಸಿವೆ. ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಹೂಡಿಕೆದಾರರು ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಮಾರುಕಟ್ಟೆಯ ಇಂದಿನ ಸ್ಥಿತಿಗತಿ:
ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಮಾರಾಟದ ಒತ್ತಡಕ್ಕೆ ಸಿಲುಕಿದ ಮಾರುಕಟ್ಟೆ ಪಾತಾಳಕ್ಕೆ ಕುಸಿಯಿತು:
• ಸೆನ್ಸೆಕ್ಸ್: 1,550 ಅಂಕಗಳ ಕುಸಿತ ಕಂಡು 72,977 ಮಟ್ಟಕ್ಕೆ ಇಳಿಕೆ.
• ನಿಫ್ಟಿ: 500 ಅಂಕಗಳಷ್ಟು ಕುಸಿದು 22,634 ಮಟ್ಟಕ್ಕೆ ತಲುಪಿದೆ.
• ಬಿಎಸ್ಇ ಮಾರುಕಟ್ಟೆ ಮೌಲ್ಯ: ಕೇವಲ ಕೆಲವೇ ನಿಮಿಷಗಳಲ್ಲಿ 429 ಲಕ್ಷ ಕೋಟಿಯಿಂದ 421 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ಕುಸಿತಕ್ಕೆ ಪ್ರಮುಖ ಕಾರಣಗಳೇನು?
1. ಟ್ರಂಪ್ ಎಚ್ಚರಿಕೆ ಹಾಗೂ ಇರಾನ್ ಸಂಘರ್ಷ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್ನ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ನೀಡಿದ 48 ಗಂಟೆಗಳ ಗಡುವು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.
2. ತೈಲ ಬೆಲೆ ಏರಿಕೆ: ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿನ ವ್ಯತ್ಯಯದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ $110 ರಿಂದ $115 ಕ್ಕೆ ಏರಿಕೆಯಾಗಿದೆ.
3. ರೂಪಾಯಿ ಮೌಲ್ಯ ಕುಸಿತ: ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವಾದ 93.89 ಕ್ಕೆ ಕುಸಿದಿದೆ.
4. ವಿದೇಶಿ ಹೂಡಿಕೆದಾರರ ಪಲಾಯನ: ಮಾರ್ಚ್ ತಿಂಗಳೊಂದರಲ್ಲೇ ವಿದೇಶಿ ಹೂಡಿಕೆದಾರರು (ಈII) ಸುಮಾರು 90,152 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಹೊರನಡೆದಿದ್ದಾರೆ.
ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ ಸುರಕ್ಷಿತ ಹೂಡಿಕೆ ಎನಿಸಿಕೊಳ್ಳುವ ಚಿನ್ನದ ಬೆಲೆಯೂ ಈ ಬಾರಿ ಕುಸಿತ ಕಂಡಿರುವುದು ಅಚ್ಚರಿ ಮೂಡಿಸಿದೆ. ಎಂಸಿಎಕ್ಸ್ (ಒಅಘಿ) ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಶೇ.3 ರಷ್ಟು ಇಳಿಕೆಯಾಗಿ 1,36,403 ರೂ. ಗೆ ತಲುಪಿದೆ.
ತಜ್ಞರ ಅಭಿಮತ: "ಮಧ್ಯ ಏಷ್ಯಾದ ಯುದ್ಧ 4ನೇ ವಾರಕ್ಕೆ ಕಾಲಿಟ್ಟಿದ್ದು, ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಕ್ಷಿಪಣಿ ದಾಳಿಗಳು ಜಾಗತಿಕ ಆರ್ಥಿಕ ಸ್ಥಿರತೆಯ ಮೇಲೆ ಭಾರಿ ಒತ್ತಡ ಹೇರುತ್ತಿವೆ," ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ನ ವಿ.ಕೆ. ವಿಜಯಕುಮಾರ್ ವಿಶ್ಲೇಷಿಸಿದ್ದಾರೆ.