ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಾರೂಯೀಪುರ್ನಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯೊಬ್ಬ ಬುಧವಾರ ಮುಂಜಾನೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಪ್ರಕರಣದ ತನಿಖೆಯ ಭಾಗವಾಗಿ ಅಪರಾಧ ನಡೆದ ಸ್ಥಳಕ್ಕೆ ಮಹಜರು ನಡೆಸಲು ಆರೋಪಿಯನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಆತ ಪೊಲೀಸ್ ಸಿಬ್ಬಂದಿಯೊಬ್ಬರ ಬಂದೂಕನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರ ತಡರಾತ್ರಿ ಆರೋಪಿಯನ್ನು ಬಾರೂಯೀಪುರ್ನ ಸೂರ್ಯಾಪುರ ಪ್ರದೇಶಕ್ಕೆ ಸ್ಥಳ ಮಹಜರಿಗೆ ಕರೆತರಲಾಗಿತ್ತು. ಇದೇ ವೇಳೆ ಆತ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈತ 11 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತನಾಗಿದ್ದು, ಅಪರಾಧಕ್ಕೂ ಮುನ್ನ ಬಾಲಕಿಯೊಂದಿಗೆ ಆತ ಕಾಣಿಸಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದು, ಎನ್‌ಕೌಂಟರ್‌ಗೆ ಕಾರಣವಾದ ಸಂಪೂರ್ಣ ಬೆಳವಣಿಗೆಗಳ ಬಗ್ಗೆ ಇಲಾಖಾ ಮಟ್ಟದಲ್ಲೂ ಪರಿಶೀಲನೆ ಮುಂದುವರಿದಿದೆ.