ಪಶು ಚಿಕಿತ್ಸಾಲಯ ನೂತನ ಕಟ್ಟಡ ಉದ್ಘಾಟನೆ

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಯಲಿಯೂರು ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡವನ್ನು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೆವಾ ಇಲಾಖೆ ಇವರ ಸಹಯೋಗದಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿ ತಾಲ್ಲೂಕಿನ ಯಲಿಯೂರು, ಆವತಿ, ತಿಂಡ್ಲು, ಕನ್ನಮಂಗಲ ಮತ್ತು ನಲ್ಲೂರು ಗ್ರಾಮಗಳಲ್ಲಿ ನಿರ್ಮಾಣಗೊಂಡ ನೂತನ ಪಶು ಚಿಕಿತ್ಸಾಲಯ ಕಟ್ಟಡಗಳ ಉದ್ಘಾಟನೆ ಮಾಡಿ ಮಾತನಾಡಿ, ಒಂದು ಕಡೆ ರೇಷ್ಮೆ ಬೆಳೆದು ಮತ್ತೊಂದು ಕಡೆ ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆಯ ಜೊತೆ ಪಶುಪಾಲನೆಯನ್ನು ಮಾಡುತ್ತಿರುವ ರೈತ ನಿಜವಾಗಿಯೂ ಕಷ್ಟ ಜೀವಿ ರೈತರ ಕಷ್ಟವನ್ನು ಅರಿತ ಬಿಜೆಪಿ ಸರ್ಕಾರ ಒಂದು ಲೀಟರ್‌ ಹಾಲಿಗೆ 5 ರೂ ಪ್ರೊತ್ಸಾಹ ಧನ ನೀಡುತ್ತಿದ್ದಾರೆ. 2008 ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ. 2 ರೂ ಪ್ರೋತ್ಸಾಹ ಧನ ನೀಡುವಲ್ಲಿ ಆರಂಭವಾಗಿ ಇಂದು ಒಂದು ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ಧನ ಸಿಗುವಂತಾಗಿದೆ. ಇದರೊಂದಿಗೆ ಹಾಲು ಒಕ್ಕೂಟವೂ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಆದರೆ ಬೇಸಿಗೆಯಲ್ಲಿ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವುದು ಅತಿ
ಮುಖ್ಯವಾದ ವಿಚಾರ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ರೈತ ದೇಶದ ಬೆನ್ನೆಲುಬು, ಅನ್ನದಾತ ಎಂದು ಹೇಳುತ್ತೇವೆ. ಸರ್ಕಾರವು ರೈತರಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಆದರೂ ರೈತರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ರೈತ ಇಂದು ಅಲ್ಪ ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ ಎಂದರೆ ಹೈನುಗಾರಿಕೆ ಅಥವ ರೇಷ್ಮೆ ಬೆಳೆಯುತ್ತಿರುವುದರಿಂದ. ಆದರೂ ರೇಷ್ಮೆ ಬೆಲೆಯಲ್ಲಿ ಆಗುತ್ತಿರುವ ಏರುಪೇರು ರೈತರನ್ನು ಕಂಗಾಲು ಮಾಡಿದೆ. ಒಂದಲ್ಲ ಒಂದು ರೀತಿಯಲ್ಲಿ ರೈತ ಕಷ್ಟ ಅನುಭವಿಸುತ್ತಿದ್ದಾನೆ. ಬೆಲೆ ಇದ್ದಾಗ ಬೆಳೆ ಇಲ್ಲ. ಬೆಳೆ ಚೆನ್ನಾಗಿ ಬಂದರೆ ಬೆಲೆ ಇರುವುದಿಲ್ಲ. ಎರಡೂ ಇದ್ದರೆ, ನೀರು, ವಿದ್ಯುತ್ ಸಮಸ್ಯೆ ಕಾಡುತ್ತದೆ. ರೈತರ ಜೀವನ ಎಂದಿಗೂ ಕಷ್ಟದಾಯಕ ಎಂದು ತಿಳಿಸಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮನುಷ್ಯರಿಗೆ ಆರೋಗ್ಯದ ಸಮಸ್ಯೆ ಉಂಟಾದಾಗ ಆಂಬ್ಯುಲೆನ್ಸ್ ಸೇವೆ, ಚಿಕಿತ್ಸೆ ಸಿಗುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ತಕ್ಷಣ ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮತ್ತು ಉತ್ತಮ ಗುಣಮಟ್ಟದ ಪಶು ವೈದ್ಯ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಯಲಿಯೂರು ಗ್ರಾಮಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿದ್ದು ಇಂದು ಪಶು ಚಿಕಿತ್ಸಾಲಯ ಕ್ಕೂ ನೂತನ ಕಟ್ಟಡ ಉದ್ಘಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಲಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೊಣ್ಣೇಗೌಡ, ಉಪಾಧ್ಯಕ್ಷೆ ಪವಿತ್ರ ಸೋಮಶೇಖರ್, ಜಿಲ್ಲಾಧಿಕಾರಿ ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯಾ ರವಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇವಣಪ್ಪ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತಕುಮಾರ್, ತಹಸೀಲ್ದಾರ್ ಶಿವರಾಜ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ, ಮಾಜಿ ಅಧ್ಯಕ್ಷ ಬಿ.ರಾಜಣ್ಣ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಶಶಿಕಲಾ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top