ಇಲಾಖೆಯ ಬಲವರ್ಧನೆಗೆ ಅಗತ್ಯ ಕ್ರಮ,  500 ಕೋಟಿ ರಾಜಸ್ವ ಸಂಗ್ರಹ ಗುರಿ

ಕಾನೂನು ಮಾಪನಶಾಸ್ತ್ರ ಇಲಾಖೆಗೆ ಸಿಬ್ಬಂದಿಗಳ ಶೀಘ್ರ ನೇಮಕ:ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೀಘ್ರ ಖಾಲಿಯಿರುವ ಸಿಬ್ಬಂದಿಗಳ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ,ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಹೇಳಿದರು. ವಿಕಾಸಸೌಧದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಒಟ್ಟು 500 ಹುದ್ದೆಗಳಲ್ಲಿ 200ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು;ಇನ್ನೂ 300 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಿಂಗಳೊಳಗೆ ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಯಮಾನುಸಾರ ಬಡ್ತಿ ನೀಡಲಾಗುವುದು ಎಂದರು.

ದೈನಂದಿನ ವ್ಯವ ಹಾರದಲ್ಲಿನ ತೂಕ ಮತ್ತು ಅಳತೆಯಲ್ಲಿ ನಿಖರತೆಯನ್ನ ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆ ಮಾಡುತ್ತಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ  ಎಂದು ಹೇಳಿದ ಸಚಿವ ಮುನಿಯಪ್ಪ ಅವರು ಇಲಾಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ  ಇನ್ನಷ್ಟು ಪರಿಣಾಮಕಾರಿಯಾಗಿ  ಕೆಲಸ ಮಾಡಿ   ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಅವರು ಹೇಳಿದರು.

 500 ಕೋಟಿ ರಾಜಸ್ವ ಸಂಗ್ರಹ ಗುರಿ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲಕ 100 ಕೋಟಿ ರಾಜಸ್ವ ಸಂಗ್ರಹಿಸಲಾಗುತ್ತಿದೆ. ಪ್ರಸಕ್ತ ವರ್ಷ 500 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಸಚಿವ ಮುನಿಯಪ್ಪ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳು, ಪೆಟ್ರೋಲ್ ಬಂಕ್ಸ್, ವೇ ಬ್ರಿಡ್ಜ್, ತಾರಾ ಹೋಟಲ್ಸ್, ಟರ್ಮಿನಲ್ಸ್, FCI, KFCSC, CWC, SWC, Airports, APMC, ಆಭರಣದ ಅಂಗಡಿಗಳು ಸೇರಿದಂತೆ ಇನ್ನೀತರ ದೈನಂದಿನ ವ್ಯವಹಾರದಲ್ಲಿ ಉಪಯೋಗಿಸುತ್ತಿರುವ ತೂಕ ಮತ್ತು ನಿಖರತೆಯನ್ನು ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಹಾಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸರಿಸುಮಾರು ಸಾವಿರ ಕೋಟಿ ರಾಜಸ್ವವನ್ನು ಸಂಗ್ರಹಿಸಲು ಸಭೆಯಲ್ಲಿ ಸೂಚಿಸಿದ್ದೇನೆ ಎಂದರು.

ಅತೀ ಹೆಚ್ಚು ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸಲು ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ವಿವರಿಸಿದ ಸಚಿವ ಮುನಿಯಪ್ಪ ಅವರು  ಕಾನೂನು ಮಾಪನಶಾಸ್ತ್ರ ಇಲಾಖೆಯು ಈ ಮೊದಲು 137 ಖಾಸಗಿ ಕಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 92 ಸ್ವಂತ ಕಛೇರಿಗಳನ್ನು ಹೊಂದಲಾಗಿದೆ. ಇನ್ನುಳಿದ 45 ಕಛೇರಿಗಳಿಗೂ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಇ-ಮಾಪನ್ ತಂತ್ರಾಂಶ ಮೇಲ್ದರ್ಜೇಗೇರಿಸಲು ಕ್ರಮ: ಇಲಾಖೆಯು ಇ-ಮಾಪನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಪ್ರಪ್ರಥಮವಾಗಿರುತ್ತದೆ. ಇ-ಮಾಪನ್ ತಂತ್ರಾಂಶವನ್ನು ಮತ್ತಷ್ಟು ಮೇಲ್ದರ್ಜೇಗೇರಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ಅವರು ತಿಳಿಸಿದರು.

ಇಲಾಖೆಯು ಸುಗಮವಾಗಿ ಕೆಲಸ ಕಾರ್ಯನಿರ್ವಹಿಸಲು ಅಗತ್ಯವಿರುವ ಲ್ಯಾಪ್ ಟಾಪ್ಗಳನ್ನು ಹಾಗೂ ಸರ್ಕಾರಿ ವಾಹನಗಳನ್ನು ತಿಂಗಳೊಳಗೆ ಒದಗಿಸಲಾಗುವುದು ಎಂದರು.

 ಇಲಾಖೆಯನ್ನು ಪುನರ್ ರಚಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ವೃಂದ ಮತ್ತು ನೇಮಕಾತಿಯನ್ನು ಮಾಡುವ ಮೂಲಕ ಇಲಾಖೆಯನ್ನು ಬಲವರ್ಧನೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಪ್ರಕಾಶ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಂಟ್ರೋಲರ್ ಅನಿತಾಲಕ್ಷ್ಮೀ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

 
Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top