ದಕ್ಷಿಣ ಕನ್ನಡ ಮಹಾಭಾರತದ ಕುರುಕ್ಷೇತ್ರದಲ್ಲಿ ನಡೆದ ಮಹಾಕದನದಲ್ಲಿ ದುರ್ಯೋಧನಾದಿಗಳ ಸಹಿತ ಅಪಾರ ಪ್ರಮಾಣದ ಕೌರವರ ಸೈನ್ಯವನ್ನು ಸೋಲಿಸಿ ಪಾಂಡವರು ವಿಜಯದ ನಗೆ ಬೀರಿದರು. ಕದನಭೂಮಿಯಲ್ಲಿ ನಡೆದ ಮಾರಣಹೋಮದ ಪಾಪ ಪರಿಹಾರದ ಸಲುವಾಗಿ ಪಾಂಡವರು ಕೃಷ್ಣನ ಸಹಿತ ಭಾರತದ ಅನೇಕ ಪುಣ್ಯಕ್ಷೇತ್ರಗಳನ್ನು ಸಂಚರಿಸಿ, ಶಿವಾಲಯಗಳನ್ನು ಪ್ರತಿಷ್ಟಾಪಿಸಿ ಪೂಜಿಸಿದರು. ಅಂತಹ ಒಂದು ದೇಗುಲವೇ ನಮ್ಮ ಇಂದಿನ ಸಂಚಿಕೆಯ ವಿಷಯ. ಮಂಗಳೂರಿನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದ ನರಹರಿ ಪರ್ವತದ ಮೇಲೆ ನರನಾದ ಅರ್ಜುನ ಮತ್ತು ಹರಿಯಾದ ಕೃಷ್ಣನಿಂದ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟಿರುವ ಸದಾಶಿವ ದೇವಾಲಯವನ್ನು ದರ್ಶನ ಮಾಡಿ ಬರೋಣ ಬನ್ನಿ.
ಈಗಾಗಾಲೇಹೇಳಿದಂತೆ ಕೃಷ್ಣನ ಜೊತೆಯಲ್ಲಿ ಹೊರಟ ಪಾಂಡವರು ಕರ್ನಾಟಕದ ದಕ್ಷಿಣ ಕನ್ನಡ ಪ್ರದೇಶದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಲು ಬಯಸಿದರಂತೆ. ಸಮೀಪದಲ್ಲಿಯೇ ಇದ್ದ ಬೆಟ್ಟವೊಂದರ ಕಡೆ ಕೈ ತೋರಿಸಿ, ಇಲ್ಲಿ ಪ್ರತಿಷ್ಠೆ ಮಾಡುವಂತೆ ಕೃಷ್ಣ ಹೇಳಿದನಂತೆ. ಕೃಷ್ಣನ ಆಜ್ಞೆಯಂತೆಯೇ ಅರ್ಜುನನು ಆ ಬೆಟ್ಟದ ಮೇಲೆ ಹೋಗಿ ಸದಾಶಿವನನ್ನು ಪ್ರತಿಷ್ಟಾಪಿಸಿದನಂತೆ. ನರನಾದ ಅರ್ಜುನನ ಜೊತೆಯಲ್ಲಿ ಹರಿಯಾದ ಕೃಷ್ಣನೂ ಸಹ ಸೇರಿಕೊಂಡು ಶಿವನನ್ನು ಪೂಜಿಸಿದ್ದರಿಂದಲೇ ಈ ಬೆಟ್ಟಕ್ಕೆ ನರಹರಿ ಪರ್ವತವೆಂದು ಹೆಸರು ಬಂದಿದೆಯಂತೆ ಎಂಬುದು ಇಲ್ಲಿನ ಸ್ಥಳ ಪುರಾಣ. ಬೇಡಿದವರ ಇಷ್ಟಾರ್ಥಗಳನ್ನು ಪೂರೈಸುವ ಶಿವನೆಂದೇ ಇಲ್ಲಿನ ಸದಾಶಿವನು ಪ್ರಸಿದ್ಧಿ. ಅರೋಗ್ಯ ಮತ್ತು ಸಂತಾನ ಭಾಗ್ಯಗಳ ವಿಷಯದಲ್ಲಂತೂ ಈ ಶಿವನು ಕರುಣಾಮಯಿ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿಯೇ ಸಹಸ್ರಾರು ಭಕ್ತಾದಿಗಳನ್ನು ನರಹರಿ ಪರ್ವತವು ತನ್ನೆಡೆಗೆ ಆಕರ್ಷಿಸುತ್ತಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿ ಇಲ್ಲಿನ ಶಿವನ ದರ್ಶನ ಪಡೆಯುವುದೇ ಒಂದು ಆನಂದ. ಅರ್ಜುನ ಪ್ರತಿಷ್ಠಾಪಿಸಿದ ಶಿವಲಿಂಗಕ್ಕೆ ಪೂಜೆ ಮಾಡಲೆಂದು ಕೃಷ್ಣನು ಇಲ್ಲಿ ನಾಲ್ಕು ಚಿಕ್ಕ ನೀರಿನ ಕಲ್ಯಾಣಿಗಳನ್ನು ನಿರ್ಮಿಸಿದನೆಂದು ಪ್ರತೀತಿ. ಕೃಷ್ಣನ ಕೈನಲ್ಲಿರುವ ಶಂಖ, ಚಕ್ರ, ಗದಾ, ಪದ್ಮಗಳ ಕುರುಹು ಈ ನಾಲ್ಕು ಕಲ್ಯಾಣಿಗಳು. ಹಾಗಾಗಿ ಈ ತೀರ್ಥ ಪ್ರೋಕ್ಷಣೆ ಸ್ವತಃ ಹರಿಯ ಕೈಗಳಿಂದಲೇ ಆಶೀರ್ವಾದ ಪಡೆದಷ್ಟು ಪವಿತ್ರ ಎಂಬುದು ಭಕ್ತರ ನಂಬಿಕೆ. ಈ ಕಲ್ಯಾಣಿಗಳ ಇನ್ನೂ ಒಂದು ವಿಶೇಷತೆಯೆಂದರೆ ಈ ಕಲ್ಯಾಣಿಗೆ ನೀರು ಎಲ್ಲಿಂದ ಹರಿದು ಬರುತ್ತದೆ? ಎಂಬ ಪ್ರಶ್ನೆ ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಬಂಡೆಗಳ ಮೇಲೆ ಯಾವುದೇ ನೀರಿನ ಮೂಲವಿಲ್ಲದೇ ಇದ್ದರೂ ಕೂಡ, ಈ ಕಲ್ಯಾಣಿಗಳು ಸದಾ ಕಾಲ ನೀರಿನಿಂದ ತುಂಬಿರುವುದು ಕ್ಷೇತ್ರದ ಮಹಿಮೆ.
ಕಾರ್ತೀಕ ಸೋಮವಾರ, ಅಮಾವಾಸ್ಯೆ, ಶಿವರಾತ್ರಿಗಳಂತಹ ವಿಶೇಷ ದಿನಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ಭಕ್ತಾದಿಗಳು ಹಗ್ಗ ಮತ್ತು ಎಳನೀರುಗಳನ್ನು ಈ ದೇವರಿಗೆ ಸಮರ್ಪಿಸುವುದು ಈ ಕ್ಷೇತ್ರದ ಇನ್ನೊಂದು ವಿಶೇಷ. ಮಂಗಳೂರಿನಿಂದ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿ (ಮಂಗಳೂರು-ಬೆಂಗಳೂರು ಹೆದ್ದಾರಿಯ ಬಿ.ಸಿ.ರೋಡ್ ನಿಂದ ಕೆಲವೇ ಕಿಲೋಮೀಟರ್) ಇರುವ ಈ ದೇವಾಲಯವನ್ನು ತಪ್ಪದೆ ನೋಡಿ ಬನ್ನಿ. ಮಂಗಳೂರು – ಬೆಂಗಳೂರು ಹೆದ್ದಾರಿಯ ಸನಿಹದಲ್ಲಿಯೇ ಇರುವುದರಿಂದ ರಸ್ತೆ ಸಂಪರ್ಕ ಚೆನ್ನಾಗಿದೆ. ನರನಾದ ಅರ್ಜುನ, ಹರಿಯಾದ ಕೃಷ್ಣ, ಹರನಾದ ಶಿವ – ಮೂವರನ್ನೂ ಏಕಕಾಲಕ್ಕೆ ನೋಡುವ ಪುಣ್ಯ ನಿಮ್ಮದಾಗಲಿ.