ಅಪಾಯಕ್ಕೆ ಸಿಲುಕಿದ ಪಂಚನದಿಗಳ ಉಗಮ ಸ್ಥಾನ ನಂದಿ ಬೆಟ್ಟ

ಸರ್ಕಾರವನ್ನು ಎಚ್ಚರಿಸಿದ ಪರಿಸರವಾದಿಗಳು ಮತ್ತು ಭೂ ವಿಜ್ಞಾನಿಗಳು

ಬೆಂಗಳೂರು:  ಐತಿಹಾಸಿಕ ಮಹತ್ವವುಳ್ಳ ಹಾಗೂ ಪಂಚನದಿಗಳ ಉಗಮ ಸ್ಥಾನ ನಂದಿಬೆಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕೈಗೆತ್ತಿಕೊಂಡಿರುವ ರೋಪ್ ವೇ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳಿಂದಾಗಿ ನಂದಿ ಬೆಟ್ಟಕ್ಕೆ ತೀವ್ರ ಆಪತ್ತು ಎದುರಾಗಿದೆ. ಕೇರಳದ ವಯಾನಾಡು ಮಾದರಿಯಲ್ಲಿ ಭೂಕುಸಿತವಾಗುವ ಆತಂಕವಿದ್ದು, ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಮತ್ತು ಭೂ ವಿಜ್ಞಾನಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಂದಿ ಬೆಟ್ಟವನ್ನು ಈಗಿರುವ ರೀತಿಯಲ್ಲಿ ಸಂರಕ್ಷಿಸಲು ಮೊದಲು ಆದ್ಯತೆ ನೀಡಬೇಕು. ಪರಿಸರಕ್ಕೆ ಮಾರಕವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಿ, ಪಂಚ ನದಿಗಳ ಉಗಮ ಸ್ಥಾನದ ಜಲ ಮೂಲಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ಪರಿಸರ ತಜ್ಞ ಡಾ. ಎ. ಎನ್. ಎಲ್ಲಪ್ಪ ರೆಡ್ಡಿ, ಗೀವ್ ಲೈಫ್ ಫೌಂಡೇಷನ್ ನ ಡಾ. ಭರತ್ ಎಸ್. ಫಿಶರ್, ಸಾಮಾಜಿಕ ಹೋರಾಟಗಾರ್ತಿ ಸಂಜನಾ ಜಾನ್, ಭೂ ವಿಜ್ಞಾನಿ ಫ್ರೊ. ರೇಣುಕಾ ಪ್ರಸಾದ್, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಯುಹೆಚ್ಆರ್ ಎಸ್ ಎಫ್ ಸಂಸ್ಥಾಪಕ ಅಧ್ಯಕ್ಷ ಸಿ.ಡಿ. ಕಿರಣ್ ಪ್ರಾತ್ಯಕ್ಷಿಕೆ ಮೂಲಕ ನಂದಿ ಬೆಟ್ಟ ಎದುರಿಸುತ್ತಿರುವ ಅಪಾಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಬೆಳಕು ಚೆಲ್ಲಿದರು.

ಡಾ. ಎ. ಎನ್. ಎಲ್ಲಪ್ಪ ರೆಡ್ಡಿ ಮಾತನಾಡಿ, ಅಪಾಯದ ಅಂಚಿಗೆ ಸಿಲುಕಿರುವ ನಂದಿಬೆಟ್ಟ ಕುರಿತು ವ್ಯಾಪಕ ಅಧ್ಯಯನ ಕೈಗೊಳ್ಳಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ರೆಸಾರ್ಟ್ಸ್ ಗಳು ಹೆಚ್ಚಾಗುತ್ತಿರುವ ಜೊತೆಗೆ ಅಲ್ಲಿನ ಪ್ರಕೃತಿಯ ಸೊಬಗಿನ ಮೇಲೆ ಒತ್ತಡ ತೀವ್ರಗೊಂಡಿದೆ. ಇದರಿಂದ ನಿಸರ್ಗ ಮುನಿಯುವ ಆತಂಕವಿದೆ. ತಕ್ಷಣವೇ ರೋಪ್ ವೇ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದರು.

ನಂದಿ ಬೆಟ್ಟ ಉಳಿಸಿ ಎಂದು ಸರ್ಕಾರದ ವಿವಿಧ 11 ಇಲಾಖೆಗಳಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಆದರೆ ಯಾವ ಇಲಾಖೆಯಿಂದಲೂ ನಮಗೆ ಪ್ರತಿಸ್ಪಂದನೆ ದೊರೆತಿಲ್ಲ. ಮೊದಲು ಭೂ ಕುಸಿತದ ತೀವ್ರತೆಯ ಬಗ್ಗೆ ಸರ್ಕಾರ ತಿಳಿದುಕೊಳ್ಳಬೇಕು. ಜೀವ ನೀಡುವ ನಂದಿಬೆಟ್ಟದ ಸೊಬಗು, ಆರೋಗ್ಯದಾಯಿ ಜೈವಿಕ ವನಗಳ ಸಂರಕ್ಷಣೆಗೆ ಒತ್ತು ನೀಡಬೇಕು. ನಂದಿ ಬೆಟ್ಟದಲ್ಲಿ ನಾಲ್ಕು ಬಾರಿ ತಂಗಿದ್ದ ಮಹಾತ್ಮಾಗಾಂಧೀಜಿ ಅವರು ಈ ತಾಣ ಆರೋಗ್ಯ ರಕ್ಷಣೆಯ ಗರ್ಭಗುಡಿ ಎಂದು ಹೇಳಿದ್ದರು. ತಕ್ಷಣವೇ ಸರ್ಕಾರ ಇದರ ರಕ್ಷಣೆಗೆ ಮುಂದಾಗಬೇಕು ಎಂದರು.

ಅರ್ಕಾವತಿ, ಪಾಲಾರ್, ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಚಿತ್ರಾವತಿ ನದಿಗಳು ಹುಟುವ ಈ ಪ್ರದೇಶ ಲಕ್ಷಾಂತರ ಜನರಿಗೆ ಜೀವನೋಪಾಯ ಕಲ್ಪಿಸಿದೆ. ಇಲ್ಲಿನ ಪರಿಸರ ಔಷಧೀಯ ಗುಣ ಹೊಂದಿದೆ. ಇಲ್ಲಿ ಈಗಾಗಲೇ ಒಣಗಿದ ನೀರಿನ ಬುಗ್ಗೆಗಳನ್ನು ಪುನರುಜ್ಜೀವನಗೊಳಿಸಬೇಕು. ಇಲ್ಲಿ ಹುಟ್ಟುವ ತೊರೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಅಂತರ್ಜಲ ಉಕ್ಕಿ ಹರಿದು ನದಿಗಳಿಗೆ ಸದಾಕಾಲ ನೀರು ಒದಗಿಸುವುದರಿಂದ, ವರ್ಷಪೂರ್ತಿ ಎಲ್ಲಾ ಜೀವ ಸಂಕುಲಕ್ಕೆ ಸಮೃದ್ಧ ಜಲಧಾರೆಯನ್ನು ಇದು ಒದಗಿಸಲಿದೆ ಎಂದು ಹೇಳಿದರು.

ನಂದಿ ಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಜನ ದಟ್ಟಣೆ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಮೇಲಿನ ಒತ್ತಡ, ಸಂಭಾವ್ಯ ಪರಿಸರ ಅವನತಿಯಿಂದಾಗಿ ಭಾರೀ ಅವಘಡಗಳಿಗೆ ಕಾರಣವಾಗಬಹುದು. ಸರ್ಕಾರಕ್ಕೆ ಪ್ರವಾಸೋದ್ಯಮವೊಂದೇ ಆದ್ಯತೆಯಾಗಬಾರದು. ಉನ್ನತ ಮಟ್ಟದ ಯಂತ್ರೋಪಕರಣಗಳ ಬಳಕೆಗೆ ತಕ್ಷಣವೇ ತಡೆಹಾಕಬೇಕು. ದಿನೇ ದಿನೇ ಶಬ್ದ ಮತ್ತು ವಾಯು ಮಾಲೀನ್ಯ ಕೂಡ ಹೆಚ್ಚಾಗುತ್ತಿದೆ. ಇದೀಗ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಾಗಿದ್ದು, ಭೌಗೋಳಿಕ, ಜೀವವೈವಿಧ್ಯ ಮತ್ತು ಆರೋಗ್ಯದ ಅಭಯಾರಣ್ಯ ಅಂಶಗಳನ್ನು ಸಂರಕ್ಷಿಸಲು ಕಟ್ಟುನಿಟ್ಟಾದ ಸಂರಕ್ಷಣಾ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top