ಪ್ರಮುಖ ರಸ್ತೆ, ವೃತ್ತಗಳಿಗೆ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಹೆಸರು ನಾಮಕರಣ

ಬಳ್ಳಾರಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಮಹನೀಯರ ಹೆಸರನ್ನು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ನಾಮಕರಣ ಮಾಡಲಾಗುವುದು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

            ಜಿಲ್ಲಾಡಳಿತ ವತಿಯಿಂದ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

 

            ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಲು ಮತ್ತು ಏಕೀಕರಣಕ್ಕೆ ಶ್ರಮಿಸಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಅವರ ಹೆಸರನ್ನು ರಸ್ತೆಗಳಿಗೆ, ವೃತ್ತಗಳಿಗೆ ನಾಮಕರಣಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. 

ರಂಜಾನ್ ಸಾಬ್: ಕರುನಾಡ ಏಕೀಕರಣಕ್ಕೆ ಬಲಿದಾನಗೈದ ಮಹಾವೀರ ಪಿಂಜಾರ್  ಪೈಲ್ವಾನ್ ರಂಜಾನ್ ಸಾಬ್ ಅವರು ಬಳ್ಳಾರಿಯವರು, ಅಂದಿಗೆ ರಾಜ್ಯಾದ್ಯಂತ ನಡೆಯುತ್ತಿದ್ದ ಕರ್ನಾಟಕ ಏಕೀಕರಣಕ್ಕೆ ಮೊದಲ ಜಯ ಸಿಕ್ಕಿದ್ದು ಬಳ್ಳಾರಿಯಲ್ಲೇ.  ಕನ್ನಡಿಗರ ಸತತ ಹೋರಾಟದ ಫಲವಾಗಿ ಬಳ್ಳಾರಿಯನ್ನು 1953ರ ಅಕ್ಟೋಬರ್ 1 ರಂದು, ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಏಕೀಕರಣದ ಪ್ರಕ್ರಿಯೆ ಬಳ್ಳಾರಿಯಿಂದಲೇ ಆರಂಭ ಆಗಿತ್ತು ಎಂದು ತಿಳಿಸಿದರು.

 

            ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸಿ ಕನ್ನಡದ ಬಾವುಟ ಸಿದ್ದಪಡಿಸಿದ್ದರು. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸಿದರೆ, ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ನಮ್ಮ ಕನ್ನಡಾಂಬೆ ಶ್ರೀ ಭುವನೇಶ್ವರಿಯ ಅರಿಶಿಣ ಕುಂಕುಮದ ಸಂಕೇತವಾಗಿದೆ. ದೇಶದಲ್ಲಿಯೇ ಅತೀ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಈ ನಮ್ಮ ಕನ್ನಡ ಸಾಹಿತ್ಯಕ್ಕೆ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವರ್ಷವಿಡೀ ಕರ್ನಾಟಕ ಸಂಭ್ರಮಾಚರಣೆ:   ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವಂಬರ್ 2023ಕ್ಕೆ 50 ವರ್ಷ ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರವು “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

            ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಅತ್ತ ಇಂಗ್ಲೀಷ್ ಕಲಿಯದೇ ಇತ್ತ ಕನ್ನಡವನ್ನೂ ಅರಿಯದೆ ಕಂಗ್ಲೀಷ್‍ಗಳಾಗುವುದು ಬೇಡ. ಅತ್ಯಂತ ಶಕ್ತಿ ಶಾಲಿಯಾದ ಹಾಗೂ ಅಗಾದ ಜ್ಞಾನ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ “ಕನ್ನಡ ಭಾಷೆಯನ್ನು ಬಳಸಿ ಉಳಿಸೋಣ.

 

            ದೇಶದ ಅತ್ಯಂತ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ಅಖಿಲ ಭಾರತ ಸೇವೆಯ ಹುದ್ದೆಗಳ ಪರೀಕ್ಷೆಗಳನ್ನು ಈಗ ಕನ್ನಡ ಮಾಧ್ಯಮದಲ್ಲಿ ಬರೆಯುವುದಕ್ಕೆ ಅವಕಾಶ ಇರುವುದರಿಂದ ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರುವುದು ಅವಶ್ಯವಾಗಿದೆ. ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ನಮ್ಮ ಹೆಮ್ಮೆಯ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಅದನ್ನು ಸದುಪಯೋಗಪಡಿಸಿಕೊಂಡು ನಮ್ಮ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಯುವ ಸಮುದಾಯಕ್ಕೆ ಸಚಿವರು ಕರೆ ನೀಡಿದರು.

ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಈ ನಮ್ಮ ನಾಡಿಗೆ ನಮ್ಮ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಖನಿಜ ನಿಕ್ಷೇಪಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಭೌತಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಲು ಕಂಕಣ ಬದ್ದರಾಗಿ ಈ ನಾಡನ್ನು ಶ್ರೀಮಂತಗೊಳಿಸೋಣ ಎಂದು ಆಶಿಸಿದರು.

            ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಕೊನೆ ಉಸಿರುವವ ತನಕ ಕನ್ನಡಿಗರಾಗಿಯೇ ಇರೋಣ ಮತ್ತು ಬಾಳೋಣ ಎಂದು ಕರೆ ನೀಡಿದರು.

 

            ಮೊಟ್ಟ ಮೊದಲ ಬಾರಿಗೆ ಇಂದು ನಗರದ ಕೋಟೆಯಲ್ಲಿ ಕನ್ನಡ ಧ್ವಜವನ್ನು ಇಂದು ಹಾರಿಸಲಾಗಿದೆ, ಅಲ್ಲಿ ಧ್ವಜರೋಹಣ ಮಾಡಿದ ಮೊದಲ ಶಾಸಕ ನಾನು, ಮುಂಬರುವ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನಗರದ ಕೋಟೆ ಮೇಲೆ ಅಚ್ಚುಕಟ್ಟಾಗಿ ಧ್ವಜಾರೋಹಣ ನೆರವೇರಿಸಲು ಧ್ವಜಸ್ತಂಭ ಹಾಗೂ ಇತರೆ ವ್ಯವಸ್ಥೆಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳು ನಾರಾಯಣರಾಯರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ರಾಷ್ಟ್ರ ಕವಿ ಕುವೆಂಪು ವಿರಚಿತ “ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆಂದಿಗೂ ಕನ್ನಡವಾಗಿರು, ರಾಷ್ಟ್ರ ಕವಿ ದ.ರಾ.ಬೇಂದ್ರಯವರ “ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ರವರ “ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಚನ್ನವೀರ ಕಣವಿಯವರ “ಹೆಸರಾಯಿತು ಕರ್ನಾಟಕ ಉಸಿರಾಗಲು ಕನ್ನಡ ಎಂಬ ಗೀತೆಗಳನ್ನು ಹಾಡುವ ಮೂಲಕ ಗಣ್ಯರು ಹಾಗೂ ಎಲ್ಲರೂ ಕನ್ನಡಾಂಬೆಗೆ ಗೀತೆ ನಮನ ಸಲ್ಲಿಸಿದರು.

 

            ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ವತಿಯಿಂದ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆ: ಅಭಿಷೇಕ್ ನಾಯರ್ (ಪ್ರಥಮ), ನಯನ (ದ್ವಿತೀಯ), ಎಂ.ಡಿ.ಸಾಧಿಕ್ (ತೃತೀಯ).

ಭಾಷಣ ಸ್ಪರ್ಧೆ: ರಶ್ಮಿ (ಪ್ರಥಮ), ಶಿವರಾಜ್ (ದ್ವಿತೀಯ), ವೀಣಾ (ತೃತೀಯ).

ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳು ಪಿಯುಸಿ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಯಶ್ವಂತ್, ಗೌರಿ, ಅನುಷಾ, ಪದ್ಮಾವತಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು.

ವಿಜೃಂಭಣೆಯಿಂದ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ:

68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಎಂದು ನಾಮಕರಣವಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿರುವÀ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ನೋಡುಗರನ್ನು ಆಕರ್ಷಿಸಿದವು.

 

            ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

            ಕೆಕೆಆರ್‍ಟಿಸಿ ನಿಗಮ ವತಿಯಿಂದ ಶಕ್ತಿ ಯೋಜನೆಯ ಕುರಿತ ನಾರಿಮಣಿಯರ ಸ್ತಬ್ಧ ಚಿತ್ರ, ಮಹಾನಗರ ಪಾಲಿಕೆ ವತಿಯಿಂದ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತ ಜಾಗೃತಿ ಫಲಕ, ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಯೋಜನೆಯ ಲಸಿಕೆ ಜಾಗೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆ ಕುರಿತ ಸ್ತಬ್ಧ ಚಿತ್ರ, ಜೆಸ್ಕಾಂ ಇಲಾಖೆಯಿಂದ ಗೃಹಜ್ಯೋತಿ ಕುರಿತ ಸ್ತಬ್ಧ ಚಿತ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಒಟ್ಟು 15 ಸ್ತಬ್ಧ ಚಿತ್ರಗಳನ್ನು ರೂಪಿಸಲಾಗಿತ್ತು.

            ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಪು) ಪದವಿ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮೀನಾಕ್ಷಿ ವೃತ್ತ, ಬ್ರೂಸ್ ಪೇಟೆ ಪೆÇಲೀಸ್ ಠಾಣೆ ಮಾರ್ಗವಾಗಿ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮುಕ್ತಾಯಗೊಂಡಿತು.

 

            ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಬಳ್ಳಾರಿ ವಲಯ ಪೆÇಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳು, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top