ಬೆಂಗಳೂರು : ಶಾಸಕ ತನ್ವೀರ್ ಸೇಠ್‍ರವರ ವಿನಂತಿಪತ್ರದ ಮೇರೆಗೆ ಗಲಭೆಕೋರರ ಕೇಸುಗಳನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದು ಅವರನ್ನು ಬಿಡುಗಡೆ ಮಾಡಿದರೆ ಅದರ ವಿರುದ್ಧ ತೀವ್ರ ರೀತಿಯ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಎಚ್ಚರಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರವು ತುಷ್ಟೀಕರಣ ರಾಜಕಾರಣ, ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇನ್ನೊಂದೆಡೆ ಕೆ.ಜೆ.ಹಳ್ಳಿ- ಡಿ.ಜೆ.ಹಳ್ಳಿ ಘಟನೆಯಡಿ ಮಾರಣಾಂತಿಕ ಹಲ್ಲೆ, ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದು, ಬಂಧನಕ್ಕೆ ಒಳಗಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ರೌಡಿಗಳನ್ನು, ಪುಡಿ ರೌಡಿಗಳನ್ನು ಬಿಡುಗಡೆ ಮಾಡಲು ಮತ್ತು ಕೇಸು ರದ್ದತಿಗೆ ತನ್ವೀರ್ ಸೇಠ್ ಅವರು ಗೃಹ ಸಚಿವ ಪರಮೇಶ್ವರರಿಗೆ ವಿನಂತಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಕೇಸನ್ನೂ ರದ್ದು ಮಾಡಿ ಬಂಧಿತರನ್ನು ಬಿಡುಗಡೆ ಮಾಡಲು ಕೋರಿದ್ದಾರೆ. ಇದನ್ನು ಸರಕಾರವು ಮನ್ನಿಸಬಾರದು ಎಂದು ಆಗ್ರಹಿಸಿದ್ದಾರೆ.
ಮಂಗಳೂರು ಗಲಭೆಯ ಕೇಸನ್ನೂ ರದ್ದು ಮಾಡಲು ಮನವಿ ಮಾಡಿದ್ದಾರೆ ಎಂದಿರುವ ಅವರು, ಬಿಜೆಪಿ ಸರಕಾರವು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಘಟನೆಯ ತನಿಖೆಯನ್ನು ಎನ್‍ಐಎಗೆ ವಹಿಸಿದೆ. ನ್ಯಾಯಾಲಯದಲ್ಲಿರುವ ಈ ಕೇಸನ್ನು ರದ್ದು ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ನಗ್ನ ವಿಡಿಯೋ ಚಿತ್ರೀಕರಣ ಮಾಡಿದ ಘಟನೆಯ ಕುರಿತ ಎಫ್‍ಐಆರ್ ದಾಖಲೆ ಮಾಡುವುದರಲ್ಲಿ ಅನಪೇಕ್ಷಿತ ವಿಳಂಬವನ್ನು ಪ್ರಶ್ನಿಸಿರುವ ಅವರು, ಒಂದು ವಾರದ ಬಳಿಕ ಪ್ರಕರಣದ ಎಫ್‍ಐಆರ್ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಇನ್ನೆಷ್ಟು ದಿನ ಬೇಕು ಎಂದು ಕೇಳಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯರ ಸರಕಾರದ ಹಿಂದಿನ ಅವಧಿಯಲ್ಲಿ ಕೂಡ ಪಿಎಫ್‍ಐ, ಎಸ್‍ಡಿಪಿಐನ ಗಲಭೆಕೋರರನ್ನು ಬಿಡುಗಡೆ ಮಾಡಿದ್ದರು. ಅದು ಹಿಂದೂ ಯುವಕರ ಹತ್ಯೆಗೆ ಕಾರಣವಾಗಿತ್ತು ಎಂದಿರುವ ಅವರು, ಮತಾಂತರಕ್ಕೆ ಪ್ರೋತ್ಸಾಹ, ಗೋವುಗಳ ಅಕ್ರಮ ಸಾಗಾಟ, ಗೋಹತ್ಯೆಯಂಥ ಒಂದು ಸಮುದಾಯದ ತುಷ್ಟೀಕರಣ ರಾಜಕಾರಣ ಸಲ್ಲದು ಎಂದು ಎಚ್ಚರಿಸಿದ್ದಾರೆ.