ನಾಗಮಂಗಲ ಗಲಾಟೆ | ಪೊಲೀಸ್ ಇನ್‍ಸ್ಪೆಕ್ಟರ್ ಅಮಾನತು

  • ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ
  • ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ

ಬೆಂಗಳೂರು : ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‍ಪೆಕ್ಟರ್ ಅಶೋಕ್ ಕುಮಾರ್‍ನನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೆರವಣಿಗೆ ಹೊರಡಬೇಕಿದ್ದ ದಾರಿಯನ್ನು ಮುಂಚಿತವಾಗಿ ನೀಡಲಾಗಿತ್ತು. ಇದನ್ನು ಇನ್‍ಸ್ಪೆಕ್ಟರ್ ಬದಲಾಯಿಸಿದ್ದರು ಎಂದರು.

ಯಾವುದೇ ಘಟನೆಗಳಾದರೆ ನಿಮ್ಮನ್ನೆ ಹೊಣೆ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ಮೊದಲೇ ಎಚ್ಚರಿಸಿದ್ದೇವೆ. ಡಿವೈಎಸ್‍ಪಿ ಮೇಲೂ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಯಾವುದೇ ಅಹಿತರ ಘಟನೆ ನಡೆಯದಂತೆ, ಮುನ್ನೆಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುತ್ತೇವೆ. ಅದರ ಆಧಾರದ ಮೇಲೆ ಡಿಜಿ ರವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಬಂಧಪಟ್ಟ ಎಲ್ಲ ಎಸ್‍ಪಿ ಮತ್ತು ಅಧಿಕಾರಿಗಳಿಗೆ ತಿಳಿಸಿರುತ್ತಾರೆ. ಸಾರ್ವಜನಿಕರೊಂದಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ, ಎಸ್‍ಪಿ ಎಲ್ಲರು ಸಹ ಸಭೆಗಳನ್ನು ನಡೆಸಿರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‍ಆರ್‍ಪಿ ವಾಹನ ಇಟ್ಟುಕೊಂಡು ಸಜ್ಜಾಗಿದ್ದರು ಎಂದರು.

 

ಸರ್ಕಾರದ ಕುಮ್ಮಕ್ಕು ನೀಡಿದೆ, ಪೂರ್ವನಿಯೋಜಿತ ಘಟನೆ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ,  ಯಾವ ಸರ್ಕಾರನೂ ಹೋಗಿ ಗಲಾಟೆ ಮಾಡಿ ಅಂತ ಹೇಳುತ್ತಾರೆಯೇ? ಈ ರೀತಿ ಆಗಬಾರದಾಗಿತ್ತು ಅಂತ ಹೇಳುವುದೇ ತಪ್ಪ. ಇವರಿಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲವೇ? ನಾವು ಹಳ್ಳಿಯಿಂದ ಬಂದವರು, ಹಳ್ಳಿ ಭಾಷೆಯಲ್ಲಿ ಹೇಳುತ್ತೇವೆ. ಟೆಕ್ಸ್ಟ ಬುಕ್ ಭಾಷೆ ಬಳಸುತ್ತೇವೆಯೇ? ಒಂದು ಮಾತನ್ನು ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇನೆ. ರಾಜ್ಯದಲ್ಲಿ ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ  ಎಂದು ಹೇಳಿದರು.

ಯಾರೇ ಆಗಿರಲಿ. ಗಣೇಶ ಹಬ್ಬ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಅನವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಸಿ, ಗಲಾಟೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೋ, ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಸಮುದಾಯವನ್ನು ತುಷ್ಟಿಕರಣ ಮಾಡುವ ಅಗತ್ಯತೆ ನಮಗೆ ಇಲ್ಲ. ಹೇಳಿಕೆಗಳನ್ನು ತಿರುಚಿ, ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಂಡರೆ ನಾವೇನು ಮಾಡಲಾಗುವುದಿಲ್ಲ ಎಂದರು.

ನಾನು ಗೃಹ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಯವರಿಂದ ಸರ್ಟಿಫಿಕೇಟ್ ಬೇಕಿಲ್ಲ. ನನಗು ಜವಾಬ್ದಾರಿ ಇದೆ. ಜವಾಬ್ದಾರಿ ಇಲ್ಲದೆ, ಆ ಸ್ಥಾನದಲ್ಲಿ ಕುಳಿತಿಲ್ಲ. ಕೆಲಸ ಮಾಡುತ್ತಿದ್ದೇವೆ. ನಾಗಮಂಗಲ ಘಟನೆಯನ್ನು ಸಮರ್ಥನೆ ಮಾಡುತ್ತಿದ್ದೇವೆಯೇ? ಯಾರು ಕಾರಣ ಆಗಿದ್ದಾರೆ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ? ಈಗಾಗಲೇ 52 ಜನರನ್ನು ಸುಮ್ಮನೆ ಬಂಧಿಸಲಾಗಿದೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹೇಳಿಕೆಗಳನ್ನು ಟ್ವಿಸ್ಟ್ ಮಾಡಿ ವ್ಯಾಖ್ಯಾನ ಮಾಡಿಕೊಳ್ಳಲಿ. ಪರಮೇಶ್ವರ ಹೀಗೆ ಹೇಳಿದರು, ಸಣ್ಣದೆಂದರು, ದೊಡ್ಡದು ಎಂದರು ಹೇಳಿಕೊಳ್ಳಲಿ. ನನಗು ಅವರಂತೆ ಮಾತನಾಡುವುದಕ್ಕೆ ಬರುತ್ತದೆ. ನಾನು ನಿನ್ನೆಯೇ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ವಿಪಕ್ಷದವರಿಗೆ ಮನವಿ ಮಾಡಿದ್ದೇನೆ. ಆದರೂ ರಾಜಕೀಯ ಮಾಡುತ್ತೇವೆ ಅನ್ನುವುದಾದರೆ ಮಾಡಲಿ. ನಾವು ನಿಭಾಯಿಸುತ್ತೇವೆ ಎಂದರು.

ಇಂತಹ ಘಟನೆಗಳಾದ ಸಂದರ್ಭದಲ್ಲಿ ಪರಿಹಾರ ಕೊಡಲು ಕೆಲವು ನಿಯಮಗಳಿವೆ. ಘಟನೆಯ ತನಿಖಾ ವರದಿ ಬಂದ ನಂತರ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top