ನಾಡಪ್ರಭು ಕೆಂಪೇಗೌಡರು ಕನ್ನಡದ ಸ್ವತ್ತು,  ಕನ್ನಡಿಗರ ಅಸ್ಮಿತೆ: ಹೆಚ್.ಡಿ.ಕುಮಾರಸ್ವಾಮಿ

ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆ ಎಂದ HDK

ಕೆಂಪೇಗೌಡರ ಬಗ್ಗೆ ಗೌರವ ಇದ್ದರೆ ಅವರು ಕಟ್ಟಿಸಿರುವ ಬೆಂಗಳೂರು ಕೆರೆಗಳನ್ನು ರಕ್ಷಣೆ ಮಾಡಿ

ನವದೆಹಲಿ: ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ, ಅವರು ಕನ್ನಡದ ಸ್ವತ್ತು. ಕನ್ನಡಿಗರ ಅಸ್ಮಿತೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಆ ಮಹಾಪುರುಷರ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಹೃದಯದಲ್ಲಿ ಗೌರವ ಎನ್ನುವುದು ಇದ್ದರೆ ಮೊದಲು ಅವರು ಕಟ್ಟಿಸಿರುವ ಕೆರೆಗಳನ್ನು ರಕ್ಷಣೆ ಮಾಡಲಿ ಎಂದು ಅವರು ಒತ್ತಾಯಿಸಿದರು.

 

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ನನ್ನ ಹೆಸರು ಹಾಕಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆ ಎಂದರು.

ಕೆಂಪೇಗೌಡರ ಜಯಂತಿಗೆ ನನಗೆ ಆಹ್ವಾನ ಇಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರೂ ಹಾಕಿಲ್ಲ ಎಂದು  ನೀವು ಕೇಳಿದಿರಿ ಎನ್ನುವ ಕಾರಣಕ್ಕೆ ನಾನು ಮತ್ನಡಬೇಕಾಯಿತು. ನನ್ನ ಹೃದಯದಲ್ಲಿ ನಾಡಪ್ರಭುಗಳು ಇದ್ದಾರೆ. ಅವರು ಕಾರ್ಯಕ್ರಮಕ್ಕೆ ಕರೆಯದಿರುವುದಕ್ಕೆ ನನಗೆ ಬೇಸರವಿಲ್ಲ, ನಾನು ಈ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ ಎಂದರು ಸಚಿವರು.

ನಾನು ಯಾವಾಗಲೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿ ಎಂದು ಹೇಳುವುದಿಲ್ಲ. ಪ್ರೀತಿಯಿಂದ ಕರೆದರೆ ಹೋಗುತ್ತೇನೆ. ನಾನು ಈಗ ದೆಹಲಿಯಲ್ಲಿ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದೇನೆ. ನಾಳೆಯ ದಿನ ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರು ಕರೆದಿದ್ದರೂ ಹೋಗಲು ಆಗುತ್ತಿರಲಿಲ್ಲ ಎಂದರು ಅವರು.

 

ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಸಹ ಆ ನಗರಕ್ಕೆ ಕೊಡುಗೆ ಕೊಟ್ಟಿದ್ದೇನೆ. ಕೆಂಪೇಗೌಡರ ಹಿರಿಮೆಗೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕೋ ಹಾಗೆ ನಡೆದುಕೊಂಡಿದ್ದೇನೆ ಎಂದರು ಅವರು.

ಕೆಂಪಗೌಡರ ಜಯಂತಿಯನ್ನು ಬೇರೆ ಬೇರೆ ರೀತಿಯಲ್ಲಿ ಜನರು ಆಚರಣೆ ಮಾಡುತ್ತಾರೆ. ಸರಕಾರ ಬೇರೆ ರೀತಿಯಲ್ಲಿ ಆಚರಣೆ ಮಾಡುತ್ತದೆ. ದೇವನಹಳ್ಳಿ ಸೇರಿ ರಾಜ್ಯದ ಅನೇಕ ಭಾಗಗಳಲ್ಲಿ ಮನೆ ಮನೆಯಲ್ಲೂ ನಾಡಪ್ರಭುಗಳ ಭಾವಚಿತ್ರ ಇಟ್ಟು ಪೂಜೆ ಮಾಡಿ ಜಯಂತಿಯನ್ನು ಆಚರಣೆ ಮಾಡುತ್ತಾರೆ. ನಾನು ಸಹ ದೆಹಲಿಯಲ್ಲಿಯೇ ಕೆಂಪೇಗೌಡರನ್ನು ಸ್ಮರಣೆ ಮಾಡುತ್ತೇನೆ ಎಂದರು ಕುಮಾರಸ್ವಾಮಿ ಅವರು.

ಕೆಂಪೇಗೌಡರು ಕಟ್ಟಿಸಿದ ಕೆರೆಗಳನ್ನು ರಕ್ಷಿಸಿ

ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಕೆಂಪೇಗೌಡರು. ಅವರು ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಆ ಕೆರೆಗಳನ್ನು ಕಾಪಾಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಮೇಕೆದಾಟು ಕಟ್ಟಬೇಕು, ಕುಡಿಯುವ ನೀರು ತರುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಆದರೆ, ನಗರದ ಜಲಮೂಲಗಳಾಗಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

 

ಈಗಲೇ ಕುಡಿಯಲು ನೀರಿಲ್ಲದೆ ಜನರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಇದೆ. 15 ವರ್ಷವಾದ ಮೇಲೆ ಬೆಂಗಳೂರಿನ ಸ್ಥಿತಿ ಏನಾಗುತ್ತದೋ ಗೊತ್ತಿಲ್ಲ. ಈ ಸರಕಾರ ನ್ಯಾಯಯುತವಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡೋದಾದರೆ ಆ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಲಿ. ಮಳೆ ನೀರನ್ನು  ಸರಿಯಾಗಿ ಬಳಸಿಕೊಳ್ಳುವತ್ತ ಚಿಂತನೆ ಮಾಡಲಿ. ಇಷ್ಟು ಮಾಡಿದರೆ ನಾನು ಸರಕಾರಕ್ಕೆ ಸಲ್ಯೂಟ್ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಚನ್ನಪಟ್ಟಣಕ್ಕೆ ಎನ್ ಡಿಎ ಅಭ್ಯರ್ಥಿ ನಿಲ್ಲುತ್ತಾರೆ

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಬಿಜೆಪಿ ಅಭ್ಯರ್ಥಿ ಅಂತಲ್ಲ, ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಒಮ್ಮತವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಇನ್ನೂ ಸಾಕಷ್ಟು ಸಮಯ ಇದೆ. ನಾವು ನಿರ್ಧಾರ ಮಾಡುತ್ತೇವೆ. ಮೈತ್ರಿ ಅಭ್ಯರ್ಥಿ ಅಲ್ಲಿ ಸ್ಪರ್ಧೆ ಮಾಡುತ್ತಾರೆ. ಬಿಜೆಪಿ -ಜೆಡಿಎಸ್ ಎನ್ನುವ ವಿಚಾರ ಅಲ್ಲಿ ಬರೋದೇ ಇಲ್ಲಾ.  ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಎಂದರು ಅವರು.

 

ಸಂಸದ ಮಲ್ಲೇಶ್ ಬಾಬು ಜತೆಯಲ್ಲಿ ಇದ್ದರು.

Facebook
Twitter
LinkedIn
Telegram
WhatsApp
Print
Email

Leave a Comment

Your email address will not be published. Required fields are marked *

Translate »
Scroll to Top