42 ಕೋಟಿ ಕಮಿಷನ್ ಹಣದ ಸಂಬಂಧ ಸಿದ್ದರಾಮಯ್ಯ, ಶಿವಕುಮಾರ್ ರಾಜೀನಾಮೆಗೆ ಎನ್.ರವಿಕುಮಾರ್ ಆಗ್ರಹ

ಬೆಂಗಳೂರು: ಗುತ್ತಿಗೆದಾರರಿಗೆ ಸರಕಾರ ಬಿಡುಗಡೆ ಮಾಡಿದ 650 ಕೋಟಿ ಹಣದಲ್ಲಿ ಬಂದಿರುವ ಕಮಿಷನ್ ಹಣವೇ 42 ಕೋಟಿ; ಅದು ಇವತ್ತು ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ತಿಳಿಸಿದರು.

 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರು ನೈತಿಕ ಹೊಣೆ ಹೊರಬೇಕು ಮತ್ತು ರಾಜೀನಾಮೆ ಕೊಡಬೇಕು. ಈ ಹಣ, ಅದರ ಹಿಂದಿನ ಉದ್ದೇಶದ ಕುರಿತು ಸಂಪೂರ್ಣ ತನಿಖೆ ಆಗಬೇಕೆಂದು ಆಗ್ರಹಿಸಿದರು. ಇದು ಕಾಂಗ್ರೆಸ್ಸಿನ ಹಣವೆನ್ನಲು ಬಿಜೆಪಿಯವರ ಬಳಿ ಏನು ಸಾಕ್ಷ್ಯವಿದೆ ಎಂದು ಎಂ.ಬಿ.ಪಾಟೀಲರು ಪ್ರಶ್ನೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಒಪ್ಪಂದ ಆದ ಬಳಿಕ 650 ಕೋಟಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಇದೊಂದು ಎಟಿಎಂ ಸರಕಾರ, ಲೂಟಿಕೋರ ಸರಕಾರ, ಕಲೆಕ್ಷನ್ ಸರಕಾರ ಎನ್ನಲು ಇದಕ್ಕಿಂತ ಬೇರೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು. ಈ ಸರಕಾರದಡಿ ಹಣ ಇಲ್ಲದೆ ವರ್ಗಾವಣೆ ಆಗುತ್ತಿಲ್ಲ. ಈ ಸರಕಾರ ಕಲೆಕ್ಷನ್ ದಂಧೆಯಲ್ಲಿ ಮುಳುಗಿದೆ. ಇದೊಂದು ಎಟಿಎಂ ಸರಕಾರ ಎಂದು ಟೀಕಿಸಿದರು. ಮಾಜಿ ಕಾರ್ಪೊರೇಟರ್ ಮನೆಯಲ್ಲೂ ಎಷ್ಟೋ ಹಣ ಸಿಕ್ಕಿದೆ ಎನ್ನುತ್ತಾರೆ. ಇದಕ್ಕಿಂತ ಪ್ರೂಫ್ ಬೇಕೇ ಎಂದು ಅವರು ಕೇಳಿದರು. ಇವರೆಲ್ಲರೂ ಕಾಂಗ್ರೆಸ್ ನಾಯಕರ ಜೊತೆಗೇ ಒಡನಾಟ ಇಟ್ಟುಕೊಂಡಿದ್ದರು ಎಂದು ದೂರಿದರು.

ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಲ್ಲಿ 23 ಪೆಟ್ಟಿಗೆಗಳಲ್ಲಿ 42 ಕೋಟಿ ಹಣ ಸಿಕ್ಕಿದೆ. ಮಾಜಿ ಕಾರ್ಪೊರೇಟರ್ ಅಶ್ವತ್ಥ್ ಅವರ ಮನೆಯ ಮೇಲೂ ದಾಳಿ ಆಗಿದೆ. ಇನ್ನೂ ಅನೇಕರ ಮನೆಗಳ ಮೇಲೆ ದಾಳಿ ಆಗಿದ್ದು, ವಿವರ ಲಭಿಸಿಲ್ಲ ಎಂದರು.

 

ಈ ಹಣವನ್ನು ತೆಲಂಗಾಣ ಚುನಾವಣೆಗೋಸ್ಕರವೇ ಸಂಗ್ರಹಿಸಿದ್ದು ಎಂದು ಬೆಂಗಳೂರಿನಾದ್ಯಂತ ಮಾತನಾಡುತ್ತಿರುವುದು ಕೇಳಿಸುತ್ತಿದೆ ಎಂದ ಅವರು, ಇದು ನಮ್ಮ ಹಣವಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದು ನಿಮ್ಮದೇ ಹಣ ಎಂದು ಬಿಜೆಪಿ ಹೇಳುತ್ತದೆ ಎಂದು ತಿಳಿಸಿದರು.

ಅನೇಕ ಗುತ್ತಿಗೆದಾರರು ಡಿ.ಕೆ.ಶಿವಕುಮಾರರನ್ನು ಭೇಟಿ ಮಾಡಿದ್ದರು. ತಮಗೆ ಬರಬೇಕಾದ ಹಣ ಬಿಡುಗಡೆಗೆ ಒತ್ತಾಯಿಸಿದ್ದರು. ಡಿ.ಕೆ.ಶಿವಕುಮಾರರ ಜೊತೆ ಎರಡು ಮೂರು ಬಾರಿ ಭೇಟಿ, ಇಂತಿಷ್ಟು ಶೇಕಡಾ ಎಂದು ಮಾತುಕತೆಯ ಬಳಿಕ ಸರಕಾರ 650 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು ಎಂದು ಅವರು ಆರೋಪಿಸಿದರು. ಗುತ್ತಿಗೆದಾರರ ಪೈಕಿ ಹೇಮಂತ್, ಪ್ರದೀಪ್ ಮತ್ತು ಪ್ರಮೋದರನ್ನು ಬಂಧಿಸಿದ್ದಾರೆ. ಈ ಮೂರು ಜನರು ಪದೇಪದೇ ಡಿ.ಕೆ.ಶಿವಕುಮಾರರನ್ನು ಭೇಟಿ ಮಾಡಿದ್ದರು ಎಂದು ಆರೋಪಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರವು ಕತ್ತಲೆ ಭಾಗ್ಯವನ್ನು ರಾಜ್ಯದ ಜನತೆಗೆ ಕೊಡುತ್ತಿದೆ ಎಂದರು. ಹಲವು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಪೂರ್ವಾಪರ ಯೋಚಿಸದೆ ಭಾಗ್ಯಗಳನ್ನು ಘೋಷಿಸಿದ್ದಾರೆ. ವಿದ್ಯುತ್ ಬೇಡಿಕೆ, ಉತ್ಪಾದನೆ ಬಗ್ಗೆ ಅದು ಯೋಚಿಸಿಲ್ಲ. ರಾಜ್ಯವನ್ನು ಕತ್ತಲೆ ರಾಜ್ಯವನ್ನಾಗಿ ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಆಕ್ಷೇಪಿಸಿದರು.

 

 ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top