ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಕೂದಲೆಳೆ ಅಂತರದಲ್ಲಿ ಬಚಾವ್

Kannada Nadu
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಕೂದಲೆಳೆ ಅಂತರದಲ್ಲಿ ಬಚಾವ್

ಬೆಂಗಳೂರು: ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿ ಫೈರಿಂಗ್ ಮಾಡಿರುವಂತಹ ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ. ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್​ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ ಸೀಟ್​ನಲ್ಲಿದ್ದ ರಿಕ್ಕಿ ರೈಗೆ ಮೂಗು, ಕೈಗೆ ಗುಂಡು ತಾಕಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2 ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ರಿಕ್ಕಿ ರಿಯಲ್ ಎಸ್ಟೇಟ್ ಬಿಸಿನೆಸ್​​​ನಲ್ಲಿ ಆಕ್ಟಿವ್ ಆಗಿದ್ದರು. ನಿನ್ನೆ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತನ್ನ ಫಾರ್ಚ್ಯೂನರ್​ ಕಾರಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರ್ತಿದ್ದಂತೆ ಗೇಟ್​​ ಬಳಿ ದುಷ್ಕರ್ಮಿ, ಎರಡು ಸುತ್ತಿನ ಫೈರಿಂಗ್​ ಮಾಡಿದ್ದಾನೆ. 70 ಎಂಎಂ ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ಮಾಡಲಾಗಿದೆ.

ಕಾರು ಡ್ರೈವ್​ ಮಾಡದೇ ಸೇಫ್​ ಆದ ರಿಕ್ಕಿ ರೈ

ರಿಕ್ಕಿ ರೈ ಪ್ರತಿ ಬಾರಿ ತಾವೇ ಕಾರು ಡ್ರೈವ್​ ಮಾಡುತ್ತಿದ್ದರು. ಹೀಗಾಗಿ ಡ್ರೈವರ್​​ ಸೀಟ್​ ಟಾರ್ಗೆಟ್​ ಮಾಡಿ ಅಟ್ಯಾಕ್​ ಮಾಡಲಾಗಿತ್ತು. ಆದರೆ ತಡರಾತ್ರಿ ಅದ್ಯಾವ ಕಾರಣವೋ ಗೊತ್ತಿಲ್ಲ ತನ್ನ ಬದಲು ಡ್ರೈವರ್​ಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ, ಹಿಂಬದಿ ಸೀಟ್​ನಲ್ಲಿ ಗನ್​ ಮ್ಯಾನ್​ ಜತೆ ಕುಳಿತಿದ್ದರು. ಹೀಗಾಗಿ ಫೈರಿಂಗ್​ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಮುಂದೆ ಬಗ್ಗಿದ್ದು, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.​

ರಸ್ತೆ ಪಕ್ಕದ ಕಾಂಪೌಡ್ ಗ್ಯಾಪ್​ ಮಧ್ಯೆ ಬಚ್ಚಿಟ್ಟುಕೊಂಡು ದುಷ್ಕರ್ಮಿ ದಾಳಿ ಮಾಡಿದ್ದಾನೆ. ಅಂದರೆ ಕಾರು ಬೆಂಗಳೂರಿಗೆ ಹೊರಡ್ತಿರಬೇಕಾದರೆ ಬಲಗಡೆ ಭಾಗದಲ್ಲಿ ಒಂದು ಕಾಂಪೌಂಡ್​ ಗ್ಯಾಪ್​ ಮಧ್ಯೆ ಅವಿತುಕೊಂಡು, ಅದರ ಒಂದು ರಂಧ್ರದಿಂದಲೇ ಫೈರಿಂಗ್​ ಆಗಿದೆ.

ಬಿಡದಿ ಮನೆಯಿಂದ KA 53 MC 7128 ನಂಬರ್​​​ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್​ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್​ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70mm ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ನಡೆಸಲಾಗಿದೆ. ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್​ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್​ನ ಎಡಭಾಗದ ಡೋರ್​ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

ರಿಕ್ಕಿ ರೈ ಹತ್ಯೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟುಕೊಂಡಿವೆ. ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿರುವ ರಿಕ್ಕಿ ರೈ ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ. ಈ ವೇಳೆ ಹಿಂಬಾಲಿಸಿ ಕಾದು ಕೃತ್ಯ ಎಸಗಲಾಗಿದೆ. ರಿಕ್ಕಿ ಬರೊದನ್ನೇ ಕಾದು ಜಾಗವನ್ನು ಗುರುತಿಸಿಕೊಳ್ಳಲಾಗಿದೆ. ಕಾಂಪೌಂಡ್​ ಒಂದರ ಮಧ್ಯೆ ಅವಿತುಕೊಂಡು ದುಷ್ಕರ್ಮಿ ಶೂಟ್​ ಮಾಡಿದ್ದಾನೆ. ಹೀಗಾಗಿ ಮಿಡ್ ನೈಟ್​ನಲ್ಲಿ ರಿಕ್ಕಿ ರೈ ಹೋಗೋ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಸಂಚಿನ ಹಿಂದಿರೋರು ಯಾರು? ಯಾವ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದರು ಅನ್ನೋದು ಪತ್ತೆ ಹಚ್ಚಲಾಗುತ್ತಿದೆ. ಮೇಲ್ನೋಟಕ್ಕೆ ಪ್ರೋಪೆಷನಲ್ ಶಾರ್ಪ್ ಶೂಟರ್​ನಿಂದಲೇ ಅಟ್ಯಾಕ್ ನಡೆದಿದ್ದು, ಅದೃಷ್ಟವಶಾತ್ ರಿಕ್ಕಿ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಪರಿಶೀಲನೆ ವೇಳೆ ಪೊಲೀಸರಿಗೆ ದುಷ್ಕರ್ಮಿಯ ಕ್ಲ್ಯೂ ಸಿಕ್ಕಿದೆ ಎನ್ನಲಾಗುತ್ತಿದೆ. ಜತೆಗೆ ಎರಡು ಬುಲೆಟ್ ಹಾಗೂ ಒಂದು ಮೊಬೈಲ್ ಪತ್ತೆಯಾಗಿದ್ದು, ಕಿರಾತಕನ ಪತ್ತೆಗೆ ಬಲೆ ಬೀಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";