ಸರ್ಕಾರದ ಬಹುತೇಕ ಯೋಜನೆಗಳು ನೇರ ಫಲಾನುಭವಿಗಳಿಗೆ

ದೇವನಹಳ್ಳಿ,ಜನವರಿ, 26 :ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಹಲವಾರು ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಹೀಗೆ ವೈವಿಧ್ಯಮಯವಾದಂತಹ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾರತಕ್ಕೆ 1950ರ ಜನವರಿ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ವಿಶ್ವದಲ್ಲಿ ಭಾರತ ಒಂದು ಸಾರ್ವಭೌಮ, ಸ್ವಾತಂತ್ರ್ಯ ರಾಷ್ಟ್ರವೆಂದು ಸಾರಿದ ಐತಿಹಾಸಿಕ ದಿನವೇ ಗಣರಾಜ್ಯೋತ್ಸವ.ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸ್ವತಂತ್ರ, ಬಲಿಷ್ಠ, ಭವ್ಯ ಭಾರತ ನಿರ್ಮಾಣ ಮಾಡುವ ಹಾಗೂ ರಾಷ್ಟ್ರಕ್ಕೆ ಉತ್ಕೃಷ್ಟವಾದ ಮತ್ತು ಸರ್ವಶ್ರೇಷ್ಠವಾದ ಸಂವಿಧಾನ ನೀಡುವ ನಿಟ್ಟಿನಲ್ಲಿ ರಾಷ್ಟ್ರದ ಅಗ್ರಗಣ್ಯ ಚಿಂತಕರ ಹಾಗೂ ತಜ್ಞರ ಚಿಂತನೆಯ ಫಲವಾಗಿ ಭಾರತ ಸಂವಿಧಾನ ರೂಪುಗೊಂಡಿತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮತ್ತು ಕೋವಿಡ್ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಸರ್ಕಾರಿ ಆಟದ ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಏರ್ಪಡಿಸಲಾದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸರಕಾರದ ಆಡಳಿತವನ್ನು ಜನಸಾಮಾನ್ಯರತ್ತ ಕೊಂಡೊಯ್ದು ಅವರಲ್ಲಿ ಸಂತೃಪ್ತಿಯನ್ನು ಮೂಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಪರಿಶಿಷ್ಠ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ವಿಶೇಷವಾಗಿ ವೃದ್ದರು, ಅಂಗವಿಕಲರು ಮತ್ತು ಗ್ರಾಮೀಣ ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಸರ್ಕಾರ ಕೋವಿಡ್ ಮಹಾಮಾರಿಯ ಸಂದರ್ಭದಲ್ಲೂ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ರಾಜ್ಯದ ಬಹುತೇಕ ಜನರು ಇಂದು ಸರ್ಕಾರದ ಯೋಜನೆಯಲ್ಲಿ ನೇರ ಫಲಾನುಭವಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ವ್ಯಾಖ್ಯೆಯನ್ನು ನೈಜಗೊಳಿಸುತ್ತಿದ್ದೇವೆ.

ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆಯನ್ನು ನೀಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18-60 ವರ್ಷದ ಒಟ್ಟು 15,70,682ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 8,06,581 ಜನರು ಮೊದಲ ಡೋಸ್ (ಶೇ. 98.5 ರಷ್ಟು) ಹಾಗೂ 7,64,101 ಜನರು ಎರಡನೇ ಡೋಸ್ (ಶೇ. 93.3 ರಷ್ಟು) ಲಸಿಕೆಯನ್ನು ಪಡೆದಿದ್ದಾರೆ. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಜನವರಿ 3 ರಿಂದ ಆರಂಭಿಸಲಾಗಿದ್ದು, ಇದುವರೆಗೂ 36,924 ಮಕ್ಕಳಿಗೆ(ಶೇ. 75.6 ರಷ್ಟು) ಲಸಿಕೆ ನೀಡಲಾಗಿದೆ. ಮೂರನೇ ಅಲೆಯ ಮೂನ್ಸೂಚನೆಯಿರುವ ಹಿನ್ನೆಲೆ, ಎರಡು ಡೋಸ್ ಲಸಿಕೆ ಪಡೆದು 9 ತಿಂಗಳುಗಳನ್ನು ಪೂರೈಸಿರುವ 60 ವರ್ಷ ಮೇಲ್ಪಟ್ಟವರಿಗೆ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕಾ ಲಸಿಕೆಯನ್ನು ನೀಡಲಾಗುತ್ತಿದ್ದು, ಇದುವರೆಗೂ ಒಟ್ಟು 9260 ಜನರಿಗೆ ಲಸಿಕೆ ನೀಡಲಾಗಿದೆ. ಎಲ್ಲಾ ವರ್ಗದಲ್ಲಿ ಈ ತಿಂಗಳಾಂತ್ಯಕ್ಕೆ ಶೇ. 100 ರಷ್ಟು ಸಾಧಿಸಲು ಗುರಿ ಹೊಂದಲಾಗಿದೆ. ಪಿ.ಎಂ. ಕೇರ್ ಅನುದಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ ಒಂದು ದ್ರವೀಕೃತ ವೈದ್ಯಕೀಯ ಆಮ್ಲಜನಕ ಘಟಕ ಹಾಗೂ ದೇವನಹಳ್ಳಿಯಲ್ಲಿ 2, ದೊಡ್ಡಬಳ್ಳಾಪುರದಲ್ಲಿ 1 ಹಾಗೂ ನೆಲಮಂಗಲದಲ್ಲಿ 1 ಆಮ್ಲಜನಕ ತಯಾರಕಾ ಘಟಕ(ಪಿಎಸ್‌ಎ)ವನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ 17 ನಾಡ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, 10 ನಾಡ ಕಛೇರಿಗಳ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 1.88 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 100 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ರೂ. 21.34 ಕೋಟಿ ಸಮುದಾಯ ಬಂಡವಾಳ ನಿಧಿ ಅನುದಾನ ಬಿಡುಗಡೆಯಾಗಿರುತ್ತದೆ. ಸದರಿ ಅನುದಾನವನ್ನು ಸಾಲವಾಗಿ 2,261 ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 682 ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ” ಸಾರ್ವಜನಿಕರಿಗೆ ಆಹಾರ ಭದ್ರತೆಯನ್ನು ಒದಗಿಸಲು ರಾಜ್ಯ ಸರ್ಕಾರದ ಪಡಿತರ ಹಂಚಿಕೆಯ ಜೊತೆಗೆ 2021ರ ಏಪ್ರಿಲ್, ಮೇ ಮತ್ತು ಜೂನ್ ಮತ್ತು ಜುಲೈ- ಮಾಹೆಯವರೆಗೆ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ, ಹೆಚ್ಚುವರಿಯಾಗಿ ವಿತರಿಸಲಾಗಿದೆ. ಹಾಗೂ ಸದರಿ ಯೋಜನೆಯನ್ನು ಮಾರ್ಚ್-2022ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎ.ರವಿ, ದೇವನಹಳ್ಳಿ ಪುರಸಭೆಯ ಅಧ್ಯಕ್ಷರಾದ ಜಿ.ರೇಖಾ, ಉಪಾಧ್ಯಕ್ಷರಾದ ಪುಷ್ಪಲತಾ ಕೆ.ಆರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ.ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಕೋನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ, ದೇವನಹಳ್ಳಿ ತಹಶೀಲ್ದಾರ್ ಅನಿಲ್‌ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

Translate »
Scroll to Top