ವಿದೇಶದಲ್ಲಿ 100 ವಿಕೆಟ್ ಕಬಳಿಸುವ ಮೂಲಕ ದಿಗ್ಗಜರ ಸಾಲಿಗೆ ಮೊಹಮ್ಮದ್ ಸಿರಾಜ್!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು 2-2 ಡ್ರಾದಲ್ಲಿ ಅಂತ್ಯಗೊಂಡಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮಿಂಚಿದರು. ಆಂಗ್ಲರ ವಿರುದ್ಧ ಅಮೋಘ ಬೌಲಿಂಗ್ ದಾಳಿ ನಡೆಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. 2025ರ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯ ಉದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್‌ಗೆ ಇದೀಗ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಭಾರತದ ಪರ ವಿದೇಶಿ ಪಿಚ್‌ಗಳಲ್ಲಿ 100 ವಿಕೆಟ್ ಸಾಧನೆ ಮಾಡಿದ 7ನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ. ವಿದೇಶಗಳಲ್ಲಿ 27 ಟೆಸ್ಟ್‌ಗಳಲ್ಲಿ ಬೌಲಿಂಗ್ ಮಾಡಿರುವ ಈ ವಿಶೇಷ ಸಾಧನೆ ಮಾಡಿದ್ದಾರೆ. ಸಿರಾಜ್‌ಗೂ ಮೊದಲು ಒಟ್ಟು 11 ಬೌಲರ್‌ಗಳು ಭಾರತ ಪರ ವಿದೇಶಿ ಪಿಚ್‌ಗಳಲ್ಲಿ ನೂರು ವಿಕೆಟ್ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದು, 69 ಪಂದ್ಯಗಳಿಂದ 269 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಕಪಿಲ್ ದೇವ್, ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ 200+ ವಿಕೆಟ್‌ಗಳನ್ನ ಪಡೆಯುವ ಮೂಲಕ ಕ್ರಮವಾಗಿ 2, 3 ಹಾಗೂ 4ನೇ ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ: ಗಂಡ ಇದ್ದಾಗಲೇ ಆತನ ʼಪ್ರಾಣʼಸ್ನೇಹಿತನಿಂದಲೇ ಗರ್ಭಿಣಿಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಈಕೆ!
ಇದಲ್ಲದೇ ಆಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಸಿರಾಜ್ 5 ಪಂದ್ಯಗಳ 9 ಇನಿಂಗ್ಸ್‌ನಲ್ಲಿ 23 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದು ಸಿರಾಜ್ ಅವರ ವೃತ್ತಿಜೀವನದಲ್ಲಿಯೇ ಟೆಸ್ಟ್ ಸರಣಿಯಲ್ಲಿ ದಾಖಲಾದ ಅತ್ಯಧಿಕ ವಿಕೆಟ್ ಎನಿಸಿಕೊಂಡಿದೆ. ಟೆಸ್ಟ್ ಸರಣಿಯೊಂದರಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ದಾಖಲೆಯಲ್ಲಿ ಸಿರಾಜ್ ಅವರು ಜಸ್ಪ್ರೀತ್ ಬುಮ್ರಾರನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 41 ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿರುವ ಸಿರಾಜ್ ನಾಲ್ಕು ಬಾರಿ 5 ವಿಕೆಟ್ ಗೊಂಚಲು ಸಹಿತ 120 ವಿಕೆಟ್ ಕಬಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಇಂಗ್ಲೆಂಡ್‌ನಲ್ಲಿ ಭಾರತದ ಪರ ಒಂದು ಇನ್ನಿಂಗ್ಸ್‌ನಲ್ಲಿ 7ನೇ ಬಾರಿಗೆ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನ ಪಡೆದಿದ್ದಾರೆ. ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿ ಕಾಡಿದ ಸಿರಾಜ್, ಅಸಾಧಾರಣ ವೇಗಿ ಎಂಬ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನುಳಿದಂತೆ ಜಸ್ಪ್ರೀತ್ ಬುಮ್ರಾ – 5, ಇಶಾಂತ್ ಶರ್ಮಾ – 4, ಕಪಿಲ್ ದೇವ್ – 3 ಮತ್ತು ಮೊಹಮ್ಮದ್ ಶಮಿ – 3 ಬಾರಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನ ಪಡೆದ ಸಾಧನೆ ಮಾಡಿದ್ದಾರೆ.
2025ರ ಆಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 185.3 ಓವರ್‌ಗಳನ್ನ ಬೌಲ್ ಮಾಡಿದರು, ಇದು ಅವರ ವೃತ್ತಿಜೀವನದ ಟೆಸ್ಟ್ ಸರಣಿಯಲ್ಲಿ ಅವರು ಮಾಡಿದ ಅತಿ ಹೆಚ್ಚು ಓವರ್‌ಗಳಾಗಿದೆ. ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸಿರಾಜ್ ಸೋಲುವ ಪಂದ್ಯದಲ್ಲಿ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಇಲ್ಲದಿದ್ದರೆ ಭಾರತ ಹೀನಾಯವಾಗಿ ಸರಣಿ ಸೋಲು ಕಾಣುತ್ತಿತ್ತು.