ಬೆಂಗಳೂರು: ನರೇಂದ್ರ ಮೋದಿಜಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಇದರ ಪರಿಣಾಮವಾಗಿ 3 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂಭ್ರಮಪಡುವ ಸುದಿನ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡಗಳಲ್ಲಿ ಪಕ್ಷ ಗೆದ್ದಿದೆ. 4 ರಾಜ್ಯಗಳ ಮತದಾರರಿಗೆ ಧನ್ಯವಾದಗಳು ಎಂದು ತಿಳಿಸಿದರು.
3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಜನರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಚೀನಾ ಮಾದರಿಯದು ಎಂದು ಜನರಿಗೆ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಅವರ ಆಡಳಿತ ಮಾದರಿ ಎಂದು ಜನರಿಗೆ ಗೊತ್ತಾಗಿದೆ ಎಂದು ತಿಳಿಸಿದರು. ಮೋದಿಯವರನ್ನು ಅಪಶಕುನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆದಿದ್ದಾರೆ. ಅಪಶಕುನ ಯಾರೆಂದು ದೇಶದ ಜನರು ತೀರ್ಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಮೋದಿಜಿ ಚಹಾ ಮಾರಾಟ ಮಾಡುತ್ತಿದ್ದ ಬಗ್ಗೆ, ಗುಜರಾತಿನ ಕುರಿತು ಟೀಕಿಸಿದ್ದರು. ತೆಲಂಗಾಣದಲ್ಲೂ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದ್ದೇವೆ. ತೆಲಂಗಾಣದಲ್ಲಿ ಬಿಆರ್‍ಎಸ್ ಪಕ್ಷದ ಕುಟುಂಬ ರಾಜಕೀಯ, ರೆಸಾರ್ಟ್ ಆಡಳಿತ ವಿರುದ್ಧವಾದ ಅಲೆ ಇದು. ಇದು ಕಾಂಗ್ರೆಸ್‍ನ ಸ್ವಂತ ಗೆಲುವಲ್ಲ ಎಂದು ತಿಳಿಸಿದರು.
ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ, ಅಮಿತ್ ಶಾಜೀ, ಎಲ್ಲ ರಾಜ್ಯ ಅಧ್ಯಕ್ಷರಿಗೂ ಅಭಿನಂದನೆಗಳು ಎಂದು ಹೇಳಿದರು. ಈ ದೇಶ, ದೇಶದ ಭವಿಷ್ಯ ಯಾರ ಕೈಯಲ್ಲಿದ್ದರೆ ಒಳ್ಳೆಯದೆಂಬ ತೀರ್ಮಾನವನ್ನು ಜನತೆ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು. ಈ ಫಲಿತಾಂಶ ಸಂಭ್ರಮ ತಂದಿದೆ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡಕ್ಕೂ ಹೋಗಿತ್ತು. ಎಲ್ಲೆಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದಿದ್ದರೋ ಅಲ್ಲೆಲ್ಲ ಇವತ್ತು ಕಾಂಗ್ರೆಸ್ ಚೋಡೋ ಆಗಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬಳಿಕ ಕಾರ್ಯಕರ್ತರಿಗೆ ಸಿಹಿ ತಿನ್ನಿಸುವ ಮೂಲಕ ಅವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಉಪಸ್ಥಿತರಿದ್ದರು.