ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡುವ ಮೂಲಕ ಹೆಂಡತಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಶನಿವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿದ್ದಾರೆ.
ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಶನಿವಾರ ಬೆಳಿಗ್ಗೆ ದೂರು ದಾಖಲಿಸಿದ್ದರು. ಸಂಜೆ ಪೊಲೀಸರು ಬಂಧಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಪೊಲೀಸರಿಂದ ಮುನಿರತ್ನ ತಲೆಮರೆಸಿಕೊಂಡು ಬೆಂಗಳೂರಿನಲ್ಲೇ ಓಡಾಡುತ್ತಿದ್ದರು. ಪೊಲೀಸರಿಂದ ಯಾವುದೇ ಕ್ರಮವಾಗದಿದ್ದಾಗ ಗುತ್ತಿಗೆದಾರ ಚಲುವರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, “ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿ ಅಸಹ್ಯವಾಗಿ ವರ್ತಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಎಫ್‌ಐಆರ್ ಆದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಗಮನಕ್ಕೆ ತಂದರು.
ಗುತ್ತಿಗೆದಾರ ಚಲುವರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುನಿರತ್ನ ದೃಶ್ಯಮಾಧ್ಯಮವೊಂದಕ್ಕೆ ಮಾತನಾಡಿ, ” ಆಡಿಯೋ ನನ್ನದಲ್ಲ. ಡಿಕೆ ಸಹೋದರರು ಕೂಡಿ ಹೂಡಿದ ಕುತಂತ್ರ ಇದು. ನನ್ನದು ತಪ್ಪಿಲ್ಲ. ಕಾನೂನು ಪ್ರಕಾರ ನಾನು ಕ್ರಮಕೈಗೊಳ್ಳುವೆ. ಆಡಿಯೋ ನನ್ನದು ಎಂದು ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ” ಎಂದು ಹೇಳಿ ಬೆಂಗಳೂರಿನಿಂದ ಪರಾರಿಯಾಗಿದ್ದರು.
ಆದರೆ, ಮುನಿರತ್ನ ಚಲನವಲನ ಬಗ್ಗೆ ನಿಗಾ ಇರಿಸಿದ್ದ ಬೆಂಗಳೂರಿನ ಪೊಲೀಸರು, ಮುನಿರತ್ನ ಅವರ ಮೊಬೈಲ್ ಲೋಕೇಶನ್ ಟ್ರ್ಯಾಕ್ ಮಾಡಿ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿದ್ದಾರೆ. ಮುನಿರತ್ನ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಮುನಿರತ್ನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.