ಇಲಾಖೆಯ ಕಾರ್ಯಕ್ರಮದಲ್ಲಿ
ಕಲಾವಿದನಿಗೆ ನಿರಂತರ ಕಾರ್ಯಕ್ರಮ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ,
ಕೊರೋನಾ ಬಳಿಕ ಅವಕಾಶ ಇಲ್ಲದೆ, ಅತಂತ್ರವಾಗಿದ್ದ ಕೊಳಲು ವಾದಕನ ಜೀವನ .
ಬೆಂಗಳೂರು : ಕೊರೋನಾ ಬಳಿಕ ಅವಕಾಶ ಇಲ್ಲದೆ, ಅತಂತ್ರವಾಗಿದ್ದ ಬೆಂಗಳೂರು ಮೂಲದ ಕೊಳಲು ವಾದಕನ ನೆರವಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಧಾವಿಸಿದ್ದಾರೆ. ಬೆಂಗಳೂರು ನಿವಾಸಿ ವೆಂಕಟರಮಣಯ್ಯ (53) ಎಂಬುವರು ವಿವಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೊಳಲು ವಾದನ ನುಡಿಸಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೋನಾ ಬಳಿಕ ಕಾರ್ಯಕ್ರಮ ದೊರಕದ ಪರಿಣಾಮ ಆದಾಯವಿಲ್ಲದೆ, ಜೀವನ ನಡೆಸುವುದು ವೆಂಕಟರಮಣಯ್ಯ ಅವರಿಗೆ ಕಷ್ಟವಾಗಿತ್ತು. ವೆಂಕಟರಮಣಯ್ಯ
ಓರ್ವ ಪುತ್ರ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ಮತ್ತೊಬ್ಬ ಪುತ್ರ ಗ್ರಾಫಿಕ್ ಡಿಸೈನ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಪುತ್ರನ ಗ್ರಾಫಿಕ್ ಡಿಸೈನ್ ಕೋರ್ಸ್ ಗೆ ಒಂದು ಲಕ್ಷ ಶುಲ್ಕ ಗಣ ಕಟ್ಟಲಾಗದೇ ವೆಂಕಟರಮಣಯ್ಯ ಅವರು ಹಣ ಹೊಂದಿಸಲು ಮನೆ- ಮನೆಗಳ ಮುಂದೆ ಕೊಳಲು ವಾದನ ನುಡಿಸಿ ಹಣ ಸಂಗ್ರಹಿಸುತ್ತಿದ್ದರು. ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಕಲಾವಿದನ ಕಷ್ಟ ಮನಗಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಪುತ್ರನ ವಿದ್ಯಾಭ್ಯಾಸಕ್ಕೆ ಬೇಕಾದ ಆರ್ಥಿಕ ಸಹಾಯ ಹಾಗೂ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಕೊಳಲು ವಾದಕ ವೆಂಕಟರಮಣಯ್ಯ ಅವರಿಗೆ ಇಲಾಖೆಯ ಕಾರ್ಯಕ್ರಮದಲ್ಲಿ ಅವಕಾಶ ಕೊಡಿಸಬಹುದು. ಪುತ್ರನಿಗೆ ಇಲಾಖೆಯಿಂದ ನೆರವು ನೀಡಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ಅವರ ಪುತ್ರನಿಗೆ ನೆರವು ನೀಡಲಾಗಿದೆ. ನಮ್ಮ ಸರ್ಕಾರ ಕಲಾವಿದರು ಹಾಗೂ ನೊಂದವರ ಪರ ಎಂದಿಗೂ ಇರಲಿದೆ ಎಂದು ಹೇಳಿದರು.
ಕೊಳಲು ವಾದಕ ವೆಂಕಟರಮಣಯ್ಯ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ವೈಯಕ್ತಿಕವಾಗಿ ನೆರವು ನೀಡಿದರು.