ಸಚಿವ ಶ್ರೀರಾಮುಲು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ

ಕಂಪ್ಲಿ:ಮಾ.04. ಸಚಿವ ಶ್ರೀರಾಮುಲು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಆರೋಪಿಸಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಹೊರವಲದ ಪರಿಶಿಷ್ಟ ಪಂಗಡದ ರೈತನ ಹೊಲದಲ್ಲಿ 2021-22ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಸುಮಾರು 70 ಲಕ್ಷ ವೆಚ್ಚದ ಚೆಕ್ ಡ್ಯಾಮ್ ನಿರ್ಮಾಣದ ಕಾಮಗಾರಿಗೆ ಇಂದು ಭೂಮಿ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಸಚಿವರು ಶಿಷ್ಟಾಚಾರ ನಿಯಮದ ಬಗ್ಗೆ ಮಾತನಾಡುತ್ತಾರೆ.

ಆದರೆ, ಸಚಿವ ಶ್ರೀರಾಮುಲಿಗೆ ಶಿಷ್ಟಾಚಾರದ ಪರಿಜ್ಞಾನ ಇಲ್ಲದೇ, ಇತ್ತೀಚಿನ ಕಾಮಗಾರಿಯ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರು ಕೈಬಿಟ್ಟಿದ್ದಾರೆ. ಇಲ್ಲೇ ಗೊತ್ತಾಗುತ್ತದೆ ಸಚಿವರಿಗೆ ಎಷ್ಟರ ಮಟ್ಟಿಗೆ ಜ್ಞಾನ ಇದೆ ಎಂಬುದು. ಶಿಷ್ಟಾಚಾರ ಬೋಧಿಸುವರು ಮೊದಲು ಶಿಷ್ಟಾಚಾರ ಪರಿಪಾಲಿಸಲಿ. ಮಾಜಿ ಶಾಸಕ ಸುರೇಶ್ ಬಾಬು ದಮ್ಮೂರು ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ತೆಗೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿಯಿದೆ. ಪೊಲೀಸರು ಅವರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಕುದ್ದು ಸಚಿವರೇ ಹೇಳಿ, ಕಂಪ್ಲಿ ನಗರದಲ್ಲಿ ಹಾಕಿದ ಕಾಂಗ್ರೆಸ್ ಬ್ಯಾನರ್ ಗಳನ್ನು ತೆಗೆಸುತ್ತಾರೆ ಅಂದರೆ ಸಚಿವರ ರಾಜಕೀಯವು ಕೆಳಮಟ್ಟದಲ್ಲಿ ಸಾಗುತ್ತಿದೆ. ಕಂಪ್ಲಿ ಸೇರಿದಂತೆ ಜಿಲ್ಲೆಗೆ ಶ್ರೀರಾಮುಲು ಕೊಡುಗೆ ಶೂನ್ಯ. ಇನ್ನೂ ಒಂದು ವರ್ಷ ಚುನಾವಣೆ ಇರುವಾಗಲೇ ಸಚಿವರು ಅಳಿಯ ಟಿ.ಹೆಚ್.ಸುರೇಶ್ ಬಾಬು ಅವರನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನಕ್ಕೆ ಇಳಿದಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂಬುದಾದರೆ, ಸಚಿವರು ಬಹಿರಂಗ ಚರ್ಚೆಗೆ ಬರಲಿ.

ಹೌಸಿಂಗ್ ಬೋರ್ಡ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಬಳ್ಳಾರಿಯಲ್ಲೇ ಇರುತ್ತಾರೆ. ಹೀಗಾಗಿ ಬಳ್ಳಾರಿ ನಗರದಲ್ಲಿ ಬಹಿರಂಗ ವೇದಿಕೆಗೆ ಸಿದ್ದ ಮಾಡಿದರೆ, ಕಂಪ್ಲಿಯಿಂದ ಬಳ್ಳಾರಿಗೆ ಬರುವೆ. ಕಂಪ್ಲಿಯಲ್ಲಿ ಸ್ಲಂ ಬೋರ್ಡ್ನ ಮನೆಗಳ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆಗೆ ಯಾರು ನಮ್ಮನ್ನು ಆಹ್ವಾನ ಮಾಡಿಲ್ಲ. ಒಂದು ವೇಳೆ ನಮಗೆ ಆಹ್ವಾನ ಪತ್ರಿಕೆ ನೀಡಿರುವುದು ಖಚಿತವಾದರೆ, ರಾಜಕೀಯದಿಂದ ನಿವೃತ್ತಿಯಾಗುವೆ. ಶ್ರೀರಾಮುಲು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳಿನ ಮಾತಿನೊಂದಿಗೆ ಜನರಿಗೆ ಮಂಕುಬೂದಿ ಹಚ್ಚುತ್ತಿದ್ದಾರೆ ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top